ನವದೆಹಲಿ/ವಾರಾಣಸಿ: ‘ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ನನ್ನ ಮಗಳಂತೆ ಎಂದು ನರೇಂದ್ರ ಮೋದಿ ಹೇಳಿಲ್ಲ. ಈ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಲಾಗಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಶುಕ್ರವಾರ ಹೇಳಿದ್ದಾರೆ.
ವಾರಾಣಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾರ ಒತ್ತಡದ ಮೇಲೆ ಸಂದರ್ಶನದ ಕೆಲವು ಭಾಗವನ್ನು ತಿರುಚಲಾಗಿದೆ ಎನ್ನುವುದರ ತನಿಖೆಗೆ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.
ಈ ನಡುವೆ, ಗುಜರಾತ್‌್ ಮುಖ್ಯಮಂತ್ರಿ ನರೇಂದ್ರ ಮೋದಿ ಕಚೇರಿಯು, ಸಂದರ್ಶನದ ಪೂರ್ಣ ಪಾಠ ಬಿಡುಗಡೆ ಮಾಡಿದೆ. ‘ಸಂದರ್ಶನದ ಯಾವ ಭಾಗವನ್ನೂ ಉದ್ದೇಶಪೂರ್ವಕವಾಗಿ ಪರಿಷ್ಕರಿಸಿಲ್ಲ ಅಥವಾ ಕತ್ತರಿ ಹಾಕಿಲ್ಲ’ ಎಂದು ಡಿಡಿ ಸುದ್ದಿವಾಹಿನಿ ನಿರ್ದೇಶಕ ಎಸ್.ಎಂ.ಖಾನ್‌್ ಹೇಳಿಕೆ ನೀಡಿದ ಬಳಿಕ ಮೋದಿ ಈ ಸಂದರ್ಶನದ ಪೂರ್ಣ ಪಾಠ ಬಿಡುಗಡೆ ಮಾಡಲು ನಿರ್ಧರಿಸಿದರು.
‘ಸರ್ಕಾರ ಒತ್ತಡದ ಮೇರೆಗೆ ಈ ಸಂದರ್ಶನದ ಕೆಲವು ಭಾಗವನ್ನು ತಿರುಚಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.
ಮೋದಿ ಹೇಳಿದ್ದೇನು?
ಮಗಳು ತಾಯಿ ಹಾಗೂ ಸಹೋದರನ ಜಯಕ್ಕಾಗಿ ಎಲ್ಲವನ್ನೂ ಮಾಡುತ್ತಾಳೆ. ಎಷ್ಟೇ ಆದರೂ ಮಗಳು ಮಗಳೇ. ಮಗಳು ತಾಯಿ ಪರವಾಗಿ ಕೆಲಸ ಮಾಡದೇ ಇನ್ನ್ಯಾರ ಪರವಾಗಿ ಮಾಡುತ್ತಾಳೆ? ಅಮ್ಮನಿಗಾಗಿ, ಸಹೋದರನಿಗಾಗಿ ಕೆಲಸ ಮಾಡುವುದು ಆಕೆಯ ಹಕ್ಕು. ಎಷ್ಟೇ ಬೈಯ್ದರೂ ಮಗಳು ಮಗಳೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.