ADVERTISEMENT

ವಾರಾಣಸಿ: ನೇಕಾರರ ಮನವೊಲಿಕೆಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ವಾರಾಣಸಿ (ಉತ್ತರ ಪ್ರದೇಶ): ‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬನಾರಸ್‌ ಕೈಮಗ್ಗದ ಸೀರೆಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆಯೇ?’ - ಹೌದೆನ್ನುತ್ತಾರೆ ಬನಾರಸಿನ ಕೈಮಗ್ಗ ನೇಕಾರರು. ದೇಶ, ವಿದೇಶಗಳಲ್ಲಿ ಬೇಡಿಕೆ ಪಡೆದಿರುವ ‘ಬನಾರಸ್‌ ಸಾಂಪ್ರ­ದಾಯಿಕ ಸೀರೆ’ಗಳು ಜಾಗತೀಕರಣ– ಉದಾರೀ­ಕರಣದ ಹಾವಳಿಗೆ ಸಿಲುಕಿ ನಶಿಸುತ್ತಿವೆ. ವಾರಾಣಸಿಯಲ್ಲಿ ಈಗ ಸುಮಾರು 40 ಸಾವಿರ ಕೈಮಗ್ಗ ನೇಕಾರರ ಕುಟುಂಬಗಳಿವೆ. ಇದರಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು. ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವ ಕೈಮಗ್ಗ ನೇಕಾರಿಕೆ ಅವನತಿ ಹಾದಿ ಹಿಡಿಯುತ್ತಿದೆ.

ಒಂದು ಕಾಲಕ್ಕೆ ವಾರಾಣಸಿಯಲ್ಲಿ ಸುಮಾರು ಒಂದು ಲಕ್ಷ ಕೈಮಗ್ಗ­ಗಳಿದ್ದವು. ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಕುಟುಂಬಗಳು ನೇಕಾರಿಕೆ ಅವಲಂಬಿಸಿ­ದ್ದವು. ನಿಧಾನವಾಗಿ  60 ಸಾವಿರ ಕೈಮಗ್ಗಗಳು ಕೆಲಸ ನಿಲ್ಲಿಸಿವೆ. ವಾರಾಣಸಿಯ ಲೋಹಾಟಿಯಾ, ಮದನಪುರ ಮತ್ತು ಲಲ್ಲಾಪುರಗಳಲ್ಲಿ ಕೈಮಗ್ಗಗಳ ಬದಲಿಗೆ ವಿದ್ಯುತ್ ಮಗ್ಗಗಳ ಸದ್ದು ಜೋರಾಗುತ್ತಿದೆ.

‘ಸಾವಿರಾರು ಕೈಮಗ್ಗಗಳು ಸ್ಥಗಿತ­ಗೊಂಡಿ­­ರುವುದರಿಂದ ಕೆಲಸವಿಲ್ಲದೆ ತೊಂದರೆ­­ಗೊಳಗಾಗಿರುವ ಕೆಲವು ಯುವಕರು ರಕ್ತ ಮಾರಾಟ ಮಾಡುತ್ತಿ­ದ್ದಾರೆ’ ಎಂದು ಲಲ್ಲಾಪುರದ ಮಹಮ್ಮದ್‌ ಉಮರ್‌ ಅನ್ಸಾರಿ, ಶರ್ಫುದ್ದೀನ್‌ ನೇಕಾರರ ಸಂಕಷ್ಟವನ್ನು ಕಣ್ಣಿಗೆ ಕಟ್ಟಿಕೊಡುತ್ತಾರೆ.

ಮೊದಲು ಕರ್ನಾಟಕದಿಂದ ಬನಾ­ರಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬರುತಿತ್ತು. ಈಗಲೂ ಬರುತ್ತಿದೆ. ಪ್ರಮಾಣ ಕಡಿಮೆ ಆಗಿದೆ. ಚೀನಾ ರೇಷ್ಮೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಕರ್ನಾಟಕದ ರೇಷ್ಮೆ ಉತ್ತಮ ಗುಣಮಟ್ಟದ್ದು. ಬೆಲೆ ಹೆಚ್ಚು. ಚೀನಾ ರೇಷ್ಮೆ ಗುಣಮಟ್ಟವೂ ಕಡಿಮೆ, ದರವೂ ಕಡಿಮೆ ಎಂದು ಅವರು ಹೇಳುತ್ತಾರೆ.

ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿದ್ಯುತ್‌ ಮಗ್ಗಗಳು ಚೀನಾ ನೂಲು ಖರೀದಿಸುತ್ತಿವೆ. ಬರೀ ನೂಲು ಮಾತ್ರ ಅಲ್ಲ, ಸಿದ್ಧಪಡಿಸಿದ ಉತ್ಪನ್ನಗಳು ಮಾರುಕಟ್ಟೆಗೆ ನುಗ್ಗುತ್ತಿವೆ. ಇದು ದೇಶಿ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.

ಕೈಮಗ್ಗದಲ್ಲಿ ಒಂದು ಸೀರೆ ನೇಯಲು ಇಡೀ ಮನೆ ಮಂದಿ ಸೇರಿಕೊಂಡರೆ, ಕನಿಷ್ಠ ಹದಿನೈದು ದಿನವಾದರೂ ಬೇಕು. ಒಂದು ಕೆ.ಜಿ ರೇಷ್ಮೆಗೆ ಐದು ಸಾವಿರ ರೂಪಾಯಿ ಪಾವತಿಸಬೇಕು. ರೇಷ್ಮೆ ಬಳಕೆ, ಗುಣಮಟ್ಟದ ಮೇಲೆ ದರ ನಿಗದಿ ಆಗಲಿದೆ. ವಿದ್ಯುತ್‌ ಮಗ್ಗಗಳಲ್ಲಿ ನೇಯುವ ಸೀರೆಗಳಿಗಿಂತ ಕೈಮಗ್ಗದಲ್ಲಿ ನೇಯುವ ಸೀರೆಗಳು ಚೆಂದ. ಆದರೆ, ಕಷ್ಟಪಟ್ಟು ನೇಯ್ದ ಸೀರೆಗಳಿಗೆ ಸೂಕ್ತ ಬೆಲೆ ದೊರೆಯದೆ ಇರುವುದರಿಂದ ಕೈಮಗ್ಗ ನೇಕಾರರು ಬೇರೆ ಉದ್ಯೋಗದ ಕಡೆ ಮುಖ ಮಾಡುತ್ತಿದ್ದಾರೆಂದು ಗುಲಾಬ್‌ಬಾಗಿನ ಅಮಿತ್ ಕುಮಾರ್‌ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲುತ್ತಾರೆ.

‘ಕೈಮಗ್ಗದ ಸೀರೆಗಳನ್ನು ವ್ಯಾಪಾರಿ­ಗಳು ಬಾಯಿಗೆ ಬಂದ ಬೆಲೆಗೆ ಕೇಳು­ತ್ತಾರೆ. ಅತ್ಯಂತ ಕನಿಷ್ಠ ಗುಣಮಟ್ಟದ ಸೀರೆಗೆ 500 ಗ್ರಾಂ ರೇಷ್ಮೆ ನೂಲು ಬಳಸಲೇಬೇಕು. ಅದನ್ನು ಸೀರೆ ವ್ಯಾಪಾರಿಗಳು ಎರಡು, ಹೆಚ್ಚೆಂದರೆ ಎರಡೂವರೆ ಸಾವಿರಕ್ಕೆ ಕೇಳುತ್ತಾರೆ. ನಾವು ರೇಷ್ಮೆ ನೂಲಿಗೇ ಎರಡೂವರೆ ಸಾವಿರ ಕೊಡಬೇಕು. ಮನೆ ಮಂದಿ ಸೇರಿ ನೇಯ್ದರೂ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದಿದ್ದರೆ ದುಡಿಮೆ ಯಾಕೆ ಬೇಕು?’ ಎಂದು ಅಮಿತ್‌ ಪ್ರಶ್ನಿಸುತ್ತಾರೆ. ‘ನಮಗೆ ವ್ಯವಸ್ಥಿತ ಮಾರುಕಟ್ಟೆ ಇಲ್ಲ. ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸ­ಬೇಕು. ಇದರಿಂದ  ನ್ಯಾಯ­ಸಮ್ಮತವ ಬೆಲೆ ಸಿಗುತ್ತದೆ’ ಎಂದು ಶಫಿ ಉರ್‌ ರೆಹಮಾನ್‌ ಆಗ್ರಹ ಮಾಡು­ತ್ತಾರೆ.

‘ಕೈಮಗ್ಗ ನೇಕಾರರ ಬದುಕು ಅತ್ಯಂತ ಕೆಟ್ಟದಾಗಿದೆ. ಬಡತನ ಕಿತ್ತು ತಿನ್ನುತ್ತಿದೆ. ಮಕ್ಕಳನ್ನು ಶಾಲಾ– ಕಾಲೇಜಿಗೆ ಕಳುಹಿಸ­ಲಾಗದ ಹೀನಾಯ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಕೈಮಗ್ಗ ನೇಕಾರಿಕೆ ಬರೀ ಒಂದು ಕಸುಬಲ್ಲ. ನೇಕಾರರ ಉಸಿರು. ವಾರಾಣಸಿ ಕಲೆ, ಸಂಸ್ಕೃತಿ–ಪರಂಪರೆಯೇ ಆಗಿರುವ ಈ ಕಸುಬನ್ನು ಹೇಗಾದರೂ ಉಳಿಸಿಕೊಳ್ಳಬೇಕು’ ಎಂದು ವಿದ್ಯುತ್‌ ಮಗ್ಗಗಳನ್ನು ಹೊಂದಿ­ರುವ ಅಹಮದ್‌ ಅನ್ಸಾರಿ ಅಭಿಪ್ರಾಯ ಪಡುತ್ತಾರೆ.
ಬನಾರಸ್‌ ಸೀರೆಗಳಿಗೆ ಆಸ್ಟ್ರೇಲಿಯಾ, ಜಪಾನ್‌ ಮತ್ತಿತರ ದೇಶಗಳಲ್ಲಿ ಬೇಡಿಕೆ ಇದೆ. ಆದರೆ, ವಿದ್ಯುತ್‌ ಮಗ್ಗದ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ. ನಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ದೇಶಿ ಮಾರುಕಟ್ಟೆಯಲ್ಲೂ ಬನಾರಸ್‌ ಸೀರೆ­ಗಳಿಗೆ ವ್ಯಾಪಕ ಬೇಡಿಕೆ ಇದೆ ಎಂದು ರೆಹಮಾನ್‌ ಹೇಳುತ್ತಾರೆ.

ಯಾವುದೇ ಪ್ರಯತ್ನವಿಲ್ಲದೆ ಬನಾರಸ್‌ ಮಾರುಕಟ್ಟೆ ವರ್ಷಕ್ಕೆ ₨ 400 ಕೋಟಿಗಳಷ್ಟು ವಹಿವಾಟು ನಡೆಸುತ್ತಿದೆ. ಸ್ವಲ್ಪ ಶ್ರಮ ಹಾಕಿದರೂ ಇದನ್ನು ಸಾವಿರ ಕೋಟಿ ರೂಪಾಯಿ­ಗಳಿಗೆ ಮುಟ್ಟಿಸ­ಬಹುದು. ಆದರೆ, ಯಾರೂ ಮುತು­ವರ್ಜಿ ವಹಿಸುತ್ತಿಲ್ಲ ಎಂದು ಬಹುತೇಕ ಕೈಮಗ್ಗ ನೇಕಾರರು ವಿಷಾದಿಸುತ್ತಾರೆ.
ಕೇಂದ್ರದಲ್ಲಿ ರಾಜೀವ್‌ ಗಾಂಧಿ ಸರ್ಕಾರ ಇರುವವರೆಗೂ ಕೈಮಗ್ಗ ನೇಕಾರಿಕೆಗೆ ಉತ್ತೇಜನವಿತ್ತು. ಅನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ನೇಕಾರ­ರನ್ನು ಮರೆತುಬಿಟ್ಟವು. ಇದರ ಪರಿ­ಣಾಮ­­­ವಾಗಿ ಕೈಮಗ್ಗಗಳು ನಿಂತು­ಹೋದವು ಎನ್ನುವುದು ನೇಕಾರರ ಕೊರಗು.

‘ಅನೇಕ ಕೈಮಗ್ಗ ನೇಕಾರರು ಕೆಲಸ­ವಿಲ್ಲದೆ ಹತಾಶರಾಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿ­ಗಳೂ ಪತ್ರಿಕೆಗಳಲ್ಲಿ ಬರುತ್ತಿವೆ. ನಮ್ಮ ಬಡಾವಣೆಯ ಜನರಿಗೆ ಧೈರ್ಯ­ಗೆಡ­ದಂತೆ ಕೂರಿಸಿಕೊಂಡು ಬುದ್ಧಿ ಹೇಳುವ ಕೆಲಸ ಮಾಡುತ್ತಿದ್ದೇನೆ’ ಎಂದು ಉಮರ್‌ ಅನ್ಸಾರಿ ಹೆೇಳುತ್ತಾರೆ.
ಕೈಮಗ್ಗಗಳನ್ನು ಪುನಶ್ಚೇತ­ನಗೊಳಿ­ಸುವ ಪ್ಯಾಕೇಜ್‌ ಅನ್ನು ಸರ್ಕಾರ ಪ್ರಕಟಿಸಬೇಕು. ಕೈಮಗ್ಗದ ಉತ್ಪನ್ನಗಳಿಗೆ ವಿಶೇಷ ತೆರಿಗೆ ರಿಯಾಯ್ತಿಗಳನ್ನು ಒದಗಿಸಬೇಕು. ಅಧಿಕಾರಶಾಹಿಗಳಿಂದ ಅನಗತ್ಯ ಕಿರುಕುಳ ತಪ್ಪಿಸಬೇಕು. ಸಮ­ರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡ­ಬೇಕು. ಅಗತ್ಯ ಸಾಲ ಸೌಲಭ್ಯ­ಗಳನ್ನು ನೇಕಾರರ ಕುಟುಂಬಗಳಿಗೆ ಒದಗಿಸಬೇಕು ಎಂದೂ ಅವರು ಒತ್ತಾಯಿಸುತ್ತಾರೆ.

ಈಗ ವಾರಾಣಸಿ ಲೋಕಸಭೆ ಚುನಾವಣೆಯಲ್ಲಿ ಕೈಮಗ್ಗ ನೇಕಾರರ ಸಮಸ್ಯೆಯೂ ಪ್ರಮುಖ ವಿಷಯ­ವಾಗಿದೆ. ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ನರೇಂದ್ರ ಮೋದಿ, ‘ಆಮ್‌ ಆದ್ಮಿ ಪಕ್ಷ’ದ ಅರವಿಂದ್‌ ಕೇಜ್ರಿವಾಲ್‌, ಕಾಂಗ್ರೆಸ್‌ನ ಅಜಯ್‌ ರಾಯ್‌ ನೇಕಾರರನ್ನು ಮನವೊಲಿಸಲು ಪೈಪೋಟಿ ನಡೆಸು­ತ್ತಿದ್ದಾರೆ.

ಮೋದಿ ಅವರು ಕಳೆದ ತಿಂಗಳು ಕೈಮಗ್ಗವನ್ನು ಹೊಸ ವಿನ್ಯಾಸ– ತಂತ್ರಜ್ಞಾನದೊಂದಿಗೆ ಪುನಶ್ಚೇತನ­ಗೊಳಿಸುವ ವಚನ ನೀಡಿದ್ದಾರೆ. ವಾರಾಣಸಿ ಕೈಮಗ್ಗ ನೇಕಾರರು ನಿಜಕ್ಕೂ ಸಂಕಷ್ಟದಲ್ಲಿದ್ದಾರೆ. ತಮಗೆ ಯಾರು ಸಹಾಯ ಹಸ್ತ ಚಾಚಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ ರೇಷ್ಮೆಗೂ ವಾರಾಣಸಿ ನೇಕಾರರಿಗೂ ಅವಿನಾಭಾವ ಸಂಬಂಧ­ವಿದೆ. ಚೀನಾದ ಅಗ್ಗದ ರೇಷ್ಮೆ ಮೇಲಿನ ಆಮದು ಸುಂಕ ಏರಿಕೆ ಮಾಡಿದರೆ ಎರಡೂ ಸಮುದಾಯಗಳ ಬದುಕು ಸುಧಾರಿಸುವುದರಲ್ಲಿ ಅನುಮಾನವಿಲ್ಲ. ಇದೇ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕದ ನಿಯೋಗ ಕಳೆದ ವರ್ಷ ಕೇಂದ್ರದ ಸಚಿವರನ್ನು ಭೇಟಿ ಮಾಡಿತ್ತು. ಆಮದು ಸುಂಕವನ್ನು ಶೇ ಐದರಿಂದ 30ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿತ್ತು. ಸರ್ಕಾರ ಶೇ 15ಕ್ಕೆ ಏರಿಸಿ ಕೈತೊಳೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.