ಬೆಂಗಳೂರು: ನಾಲ್ಕೂವರೆ ದಶಕಗಳ ದಣಿವರಿಯದ ಹೋರಾಟ ನಡೆಸಿ ಮೂರು ವರ್ಷ ಅಧಿಕಾರದ ಆಟ ನಡೆಸಿದ್ದ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂ
ರಪ್ಪ ಮತ್ತೆ ಈಗ ‘ಕತ್ತಿ ಅಲುಗಿನ ಮೇಲೆ’ ನಡೆಯಬೇಕಾದ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಂಡಿದ್ದಾರೆ.
ಅದು ಅವರಿಗೆ ಸಲೀಸಾಗಿ ಒಲಿದು ಬಂದ ಭಾಗ್ಯವಲ್ಲ. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಘೋಷಣೆಗೆ ಅನ್ವರ್ಥದಂತಿರುವ ಈ ರೈತ ನೇತಾರ, ಅದಕ್ಕಾಗಿ ಭಗೀರಥ ಪ್ರಯತ್ನ ಪಟ್ಟಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಅವಮಾನ, ಕಿರುಕುಳಗಳನ್ನು ಸಹಿಸಿಕೊಂಡಿದ್ದಾರೆ. ತೀರಾ ಅಪಮಾನವಾದಾಗ ಸಿಡಿದೆದ್ದು ಪಕ್ಷವನ್ನೇ ಮೂಲೋತ್ಪಾಟನೆ ಮಾಡುವ ಸಂಕಲ್ಪ ತೊಟ್ಟು ಹೊರನಡೆದು, ‘ಮಾತೃ ಪಕ್ಷ’ ಎಂದು ಈಗ ಕರೆಯುತ್ತಿರುವ ಬಿಜೆಪಿಯನ್ನೇ 2013ರ ಚುನಾವಣೆಯಲ್ಲಿ ಮಕಾಡೆ ಮಲಗಿಸಿದ್ದಾರೆ.
ಒಂದರ್ಥದಲ್ಲಿ ‘ಛಲದೋಳ್ ದುರ್ಯೋದನಂ’ ಎಂಬ ಮಾತು ಅನೇಕ ಬಾರಿ ಯಡಿಯೂರಪ್ಪಗೆ ಅನ್ವಯಿಸುತ್ತದೆ. ಏಕೆಂದರೆ ಇಂತಹ ನಡೆಯಿಂದ ಅವರು ಪಡಬಾರದ ಬಾಧೆಯನ್ನೂ ಅನುಭವಿಸಿದ್ದಾರೆ.
ಹೋರಾಟವೇ ಉಸಿರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು ಯಡಿಯೂರಪ್ಪ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ಸಂಘದ ಸಂಪರ್ಕ ಕಾರಣದಿಂದ ತಮ್ಮ ಹುಟ್ಟೂರು ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆಯಿಂದ ದೂರದ ಶಿಕಾರಿಪುರ ತಲುಪಿದ ಅವರು, ಅಲ್ಲಿ ಹೊಟ್ಟೆಪಾಡಿಗೆ ವೀರಭದ್ರ ಶಾಸ್ತ್ರಿಗಳ ಒಡೆತನದಲ್ಲಿದ್ದ ರೈಸ್ ಮಿಲ್‌ನಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿದರು. ಸಂಘದ ಚಟುವಟಿಕೆ ಜತೆಗೆ ರಾಜಕೀಯದಲ್ಲೂ ಸಕ್ರಿಯರಾದರು.
1972ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ರಾಜಕೀಯ ಜೀವನದ ಮೊದಲ ಮೆಟ್ಟಿಲು. ಅಲ್ಲಿಂದ ಹಿಂತಿರುಗಿ ನೋಡದ ಯಡಿಯೂರಪ್ಪ ಶಿಕಾರಿಪುರ ಪುರಸಭೆಯ ಅಧ್ಯಕ್ಷರಾದರು. ವಿಧಾನಸೌಧದ ಮೂರನೇ ಮೆಟ್ಟಿಲು ಏರಿದರು, ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ನಡೆಸಿದರು. ಅತ್ತ ಲೋಕಸಭೆಗೂ ಕಾಲಿಟ್ಟರು. ಹೋರಾಟದ ಗಾಥೆಯಿಂದ ರಾಜಕೀಯದ ಹಲವು ಮಜಲುಗಳನ್ನು ಏರಿದ ಅವರು, ಈಗ ಮೂರನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1983ರಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾದಾಗ ಬಿಜೆಪಿಯಿಂದ ಇದ್ದದ್ದು ಇಬ್ಬರೇ ಶಾಸಕರು. ಆರ್‌ಎಸ್‌ಎಸ್ ಕಾರ್ಯಕರ್ತರ ಶ್ರಮ, ಪಕ್ಷದ ಹಿರಿಯ ನಾಯಕರ ಸಂಘಟನಾ ಬಲ, ಯಡಿಯೂರಪ್ಪನವರ ರೈತಪರ ಹೋರಾಟದ ಫಲವಾಗಿ 1996ರಲ್ಲಿ ನಡೆದ ಚುನಾವಣೆಯಲ್ಲಿ ಕಮಲ ಪಕ್ಷದ ಬಲ 44ಕ್ಕೆ ಏರಿತು. 1999ರಲ್ಲಿ ಪಕ್ಷದ ಸಂಘಟನೆಗಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ‘ಸಂಕಲ್ಪ ಯಾತ್ರೆ’ ನಡೆಸಿ ರಾಜ್ಯದಾದ್ಯಂತ ಸುತ್ತಾಡಿದರು. ಆದರೆ, ಆಗ ನಡೆದ ಚುನಾವಣೆಯಲ್ಲಿ ಅವರು ಸೋಲು ಕಂಡರು.
2004ರ ಹೊತ್ತಿಗೆ ಚಿತ್ರಣ ಬದಲಾಗಿತ್ತು. ಹಿಂದುಳಿದ ಸಮುದಾಯದ ನಾಯಕ ಎಸ್. ಬಂಗಾರಪ್ಪ ಬಿಜೆಪಿ ತೆಕ್ಕೆಗೆ ಬಂದು ಬಿಟ್ಟಿದ್ದರು. ಆಗ ನಡೆದ ಚುನಾವಣೆಯಲ್ಲಿ ಬಿಜೆಪಿ ಬಲ 79ಕ್ಕೆ ಏರಿತು. ಆದರೆ, ಅಧಿಕಾರದ ಹತ್ತಿರವೂ ಸುಳಿಯಲಿಲ್ಲ.
2006ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಜತೆ ಸೇರಿ ಸರ್ಕಾರ ರಚಿಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲುದಾರಿಕೆಯ ಮೊದಲ ಸರ್ಕಾರ ರಚಿಸುವಲ್ಲಿ ಯಡಿಯೂರಪ್ಪ ‘ಶ್ರಮ’ ಹಾಕಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದ ಸರ್ಕಾರ ಅಸ್ತಿತ್ವ ಬಂತು. ಆದರೆ, ಈ ಸರ್ಕಾರ ಹೆಚ್ಚು ಕಾಲ ಬಾಳಲಿಲ್ಲ.
‘20 ತಿಂಗಳ ಬಳಿಕ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತಿಗೆ ತಪ್ಪಿ ವಿಶ್ವಾಸ ದ್ರೋಹ’ ಮಾಡಿದ್ದಾರೆ ಎಂದು ಆಪಾದಿಸಿದ ಯಡಿಯೂರಪ್ಪ, ಚುನಾವಣೆಗೆ ಹೋದರು. 2008ರ ಮೇ ನಲ್ಲಿ ಚುನಾವಣೆ ನಡೆಯಿತು. ಆಗ ಸರಳ ಬಹುಮತ ಬರಲಿಲ್ಲ. ಮತ್ತೆ ಅತಂತ್ರ ಪರಿಸ್ಥಿತಿ ಎದುರಾಯಿತು. ಆಗ ಆರು ಪಕ್ಷೇತರನ್ನು ಸೆಳೆದು, ಅಧಿಕಾರ ಹಿಡಿಯುವ ಅನಿವಾರ್ಯ ಪರಿಸ್ಥಿತಿಯನ್ನು ಅವರು
ಎದುರಿಸಿದರು.
‘ತೂಗುಯ್ಯಾಲೆ’ ಸರ್ಕಾರದ ಸಾರಥಿಯಾಗಿದ್ದ ಯಡಿಯೂರಪ್ಪ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದರು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ವಹಿಸಿದ್ದರು. 2011ರ ಜುಲೈನಲ್ಲಿ ಲೋಕಾಯುಕ್ತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಯಡಿಯೂರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ವರದಿ ನಿಲ್ಲಿಸಿತ್ತು. ಹೀಗಾಗಿ, ಮೂರು ವರ್ಷ ಪೂರ್ಣಗೊಳ್ಳುವ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಾಯಿತು. ಅದಾದ ಅಲ್ಪಾವಧಿಯಲ್ಲೇ, ಬಂಧನಕ್ಕೆ ಒಳಗಾಗಿ 24 ದಿನಗಳ ಜೈಲು ವಾಸವನ್ನೂ ಅನುಭವಿಸಿದರು. ಸದ್ಯ ಬಹುತೇಕ ಆರೋಪಗಳಿಂದ ದೋಷಮುಕ್ತರಾಗಿದ್ದಾರೆ.
ಬಿಜೆಪಿ ವಿರುದ್ಧ ಸೆಟೆದೆದ್ದ ಅವರು ತಮ್ಮದೇ ಆದ ಕೆಜೆಪಿ ಕಟ್ಟಿ, ಪ್ರಾದೇಶಿಕ ಪಕ್ಷ ಶಕೆ ಆರಂಭವಾಗಿದೆ ಎಂದು ಘೋಷಿಸಿದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿ 6 ಸ್ಥಾನ ಗೆದ್ದರೆ, ಬಿಜೆಪಿ ಬಲ 40ಕ್ಕೆ ಕುಸಿದಿತ್ತು. ಪಕ್ಷ ಗೆಲ್ಲಿಸುವ ಶಕ್ತಿ ತಮಗಿದೆ ಎಂಬುದನ್ನು ನಿರೂಪಿಸಿದರು. ತನ್ನನ್ನು ಎದುರು ಹಾಕಿಕೊಂಡಿರೆ ಸೋಲು ಶತಸ್ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದರು. 2014ರ ಲೋಕಸಭೆ ಚುನಾವಣೆ ವೇಳೆ ಮತ್ತೆ ಬಿಜೆಪಿ ಸೇರಿ, ಸಂಸದರಾಗಿ ಆಯ್ಕೆಯಾದರು. ರಾಜ್ಯ ಘಟಕದ ಅಧ್ಯಕ್ಷರೂ ಆದರು.
ಯಡಿಯೂರಪ್ಪ ಹೆಗ್ಗಳಿಕೆ
ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದಾಗ ಮಾಡಿದ ಸಾಧನೆಯೇ ತಮಗೆ ಶ್ರೀರಕ್ಷೆ ಎಂದು ಯಡಿಯೂರಪ್ಪ ಹೇಳಿಕೊಳ್ಳುವುದುಂಟು. ಬಡವರ ಬಾಳಿಗೆ ಮಾರಕವಾಗಿದ್ದ ಲಾಟರಿ, ಸಾರಾಯಿ ನಿಷೇಧ ತಮ್ಮದೇ ಕೊಡುಗೆ ಎಂದು ಅವರು ಪ್ರತಿಪಾದಿಸುತ್ತಾರೆ. ಇದರ ಜತೆಗೆ, ಭಾಗ್ಯಲಕ್ಷ್ಮಿ ಯೋಜನೆ, ಪ್ರೌಢಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಸೈಕಲ್, ರೈತರಿಗೆ ಶೇ 3ರ ಬಡ್ಡಿದರದಲ್ಲಿ ಸಾಲ, ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್, ಸುವರ್ಣ ಭೂಮಿ, ಸುವರ್ಣ ಗ್ರಾಮ ತಮ್ಮ ‘ಬ್ರ್ಯಾಂಡ್’ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಪರಿಚಯ
ಹೆಸರು: ಬಿ.ಎಸ್. ಯಡಿಯೂರಪ‍್ಪ
ತಂದೆ: ಸಿದ್ದಲಿಂಗಪ್ಪ
ತಾಯಿ: ಪುಟ್ಟತಾಯಮ್ಮ
ಜನನ: 27.2.1943
ಪತ್ನಿ: ಮೈತ್ರಾದೇವಿ
ಮಕ್ಕಳು: ಪದ್ಮಾವತಿ, ಉಮಾದೇವಿ, ಅರುಣಾದೇವಿ, ರಾಘವೇಂದ್ರ, ವಿಜಯೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.