ADVERTISEMENT

ಬಿಜೆಪಿಗೇ ಅಚ್ಚರಿ ಮೂಡಿಸಿದ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:48 IST
Last Updated 16 ಮೇ 2014, 19:48 IST

ಹಿಂದಿ ಭಾಷಿಕ ರಾಜ್ಯಗಳಲ್ಲಿ ‘ಮೋದಿ ಬಿರುಗಾಳಿ’ಗೆ ಸಿಲುಕಿ ಉಳಿದೆಲ್ಲ ಪಕ್ಷಗಳು ಧೂಳೀಪಟವಾಗಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸಗಡ, ಬಿಹಾರ, ಜಾರ್ಖಂಡ್‌ ಜನ ಮುಗಿಬಿದ್ದು ‘ಭಾರತೀಯ ಜನತಾ ಪಕ್ಷ’ವನ್ನು ಬೆಂಬಲಿಸಿದ್ದಾರೆ. ಈ ರಾಜ್ಯಗಳ ಚುನಾವಣೆ ಫಲಿತಾಂಶ ಅನಿರೀಕ್ಷಿತವ­ಲ್ಲದಿದ್ದರೂ, ಇಷ್ಟೊಂದು ದೊಡ್ಡ ಪ್ರಮಾಣದ ಗೆಲುವು ಸಾಧ್ಯವಾಗಬ­ಹುದೆಂದು ಸ್ವತಃ ಬಿಜೆಪಿ ಮುಖಂಡರೇ ಎಣಿಸಿರಲಿಲ್ಲ.

ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ‘ಬಹುಜನ ಸಮಾಜ ಪಕ್ಷ’ ನಿರ್ನಾಮವಾಗಿದೆ. ಕಾಂಗ್ರೆಸ್‌ನಲ್ಲಿ ಅಮ್ಮ, ಮಗ ಬಿಟ್ಟರೆ ಉಳಿದೆಲ್ಲ ನಾಯಕರು ಸೋಲಿನ ಕಹಿ ಅನುಭವಿಸಿದ್ದಾರೆ. ‘ಸಮಾಜವಾದಿ ಪಕ್ಷ’ ಒಂದಂಕಿ ದಾಟಲಾಗದೆ ಮುಖಭಂಗ ಅನುಭವಿಸಿದೆ. ಬಿಜೆಪಿ 71 ಮತ್ತು ಅದರ ಮಿತ್ರ ಪಕ್ಷ ‘ಅಪ್ನಾದಳ’ ಎರಡು ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿವೆ. 16 ವರ್ಷದ ಹಿಂದೆ 1998ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನ ಪಡೆದಿತ್ತು. ಉತ್ತರಾಖಂಡ ಆಗಿನ್ನೂ ಬೇರೆ ಆಗಿರಲಿಲ್ಲ. ಈ ಚುನಾವಣೆ ಹೊಸ ದಾಖಲೆ ಬರೆದಿದೆ. ಬಿಜೆಪಿಯ ಐತಿಹಾಸಿಕ ಗೆಲುವಿಗೆ ಒಂದಲ್ಲ. ಎರಡಲ್ಲ ಹತ್ತಾರು ಕಾರಣಗಳಿವೆ.

‘ಗುಜರಾತ್‌ ಯಶೋಗಾಥೆ’ ಎಲ್ಲ ರಾಜ್ಯಗಳ ಜನರಿಗೆ ಹಿಡಿಸಿದೆ. ‘ಹೊಸ ಪ್ರಧಾನಿ ನಮ್ಮ ರಾಜ್ಯವನ್ನು ಗುಜರಾತಿನ ಮಾದರಿಯಲ್ಲಿ ಅಭಿವೃದ್ಧಿ ಮಾಡ­ಬಹುದು’ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ರಸ್ತೆ, ನೀರು, ವಿದ್ಯುತ್‌, ನಿರುದ್ಯೋಗ ಸಮಸ್ಯೆಗಳು ದೂರವಾಗಬಹುದು’ ಎಂದು ನಿರೀಕ್ಷಿಸಿದ್ದಾರೆ. ಮೋದಿ ಅವರು ಕೊಟ್ಟ ಮಾತು ನಡೆಸುತ್ತಾರೆ ಎಂದು ನಂಬಿದ್ದಾರೆ. ಯುಪಿಎ ಸರ್ಕಾರದ ದುರಾಡಳಿತ, ಬೆಲೆ ಏರಿಕೆ ನೀತಿ, ಭ್ರಷ್ಟಾಚಾರ ಹಗರಣಗಳಿಂದ ರೋಸಿ ಹೋದ ಜನ ಬದಲಾವಣೆ ಬಯಸಿ ಬಿಜೆಪಿ ಅಪ್ಪಿಕೊಂಡಿದ್ದಾರೆ.

ಹೊಣೆ ನಿಭಾಯಿಸಿದ ಅಮಿತ್‌ ಷಾ: ಮೋದಿ ಸೂಚನೆ ಮೇಲೆ ಆರು ತಿಂಗಳ ಹಿಂದೆ ಉತ್ತರ ಪ್ರದೇಶಕ್ಕೆ ‘ವಲಸೆ’ ಬಂದ ಅಮಿತ್‌ ಷಾ ತಮಗೆ ವಹಿಸಿದ ಹೊಣೆಯನ್ನು ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ. ಟಿಕೆಟ್‌ ಹಂಚಿಕೆಯಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮುತುವರ್ಜಿಯಿಂದ ಮಾಡಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ­್ಲಿರುವ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ‘ಸಾಂಪ್ರದಾಯಿಕ ನೆಲೆ’ಯನ್ನು ನಾಶಪಡಿಸಿದ್ದಾರೆ.

ಎಲ್ಲ ಹಿಂದೂ ಜಾತಿಗಳನ್ನು ಒಗ್ಗೂಡಿಸಿದ್ದಾರೆ. ದಲಿತರು, ಹಿಂದುಳಿದ ವರ್ಗಗಳನ್ನು ಬಿಜೆಪಿ ಜಾಲದೊಳಕ್ಕೆ ತಂದಿದ್ದಾರೆ. ದಲಿತರಲ್ಲಿ ‘ಧರ್ಮ ಜಾಗೃತಿ’ ಮೂಡಿಸಿದ್ದಾರೆ. 2007ರ ವಿಧಾನಸಭೆ ಚುನಾವಣೆಯಂತೆ ‘ದಲಿತರು – ಬ್ರಾಹ್ಮಣರ ಸಮೀಕರಣದ ಪ್ರಯೋಗ’ಕ್ಕೆ ಬಿಎಸ್‌ಪಿ ಈಗಲೂ ಮುಂದಾಗಿತ್ತು. ಆದರೆ, ಅದು ವಿಫಲವಾಗಿದೆ. 29 ಕ್ಷೇತ್ರಗಳಲ್ಲಿ ಮೇಲ್ಜಾತಿ ಅಭ್ಯರ್ಥಿಗಳಿಗೆ, 19 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ, 15 ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಮೀಸಲು ಕ್ಷೇತ್ರಗಳಲ್ಲಿ ಮಾತ್ರ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿ­ಗಳಿಗೆ ಟಿಕೆಟ್‌ ನೀಡಿತ್ತು. ಅದ್ಯಾವುದೂ ನೆರವಿಗೆ ಬರಲಿಲ್ಲ.

ಮುಸ್ಲಿಂ ಮತಗಳು: ಸಮಾಜವಾದಿ ಪಕ್ಷ ಮುಸ್ಲಿಮರು– ಯಾದವರ ಸಮೀಕರಣಕ್ಕೆ ಪ್ರಯತ್ನಿಸಿತು. ರಾಜ್ಯದ ಮುಸ್ಲಿಮರು ಮೋದಿ ಅವರನ್ನು ಸೋಲಿಸುವ ಒಂದಂಶದ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಆದರೆ, ಯಾರು ಬಿಜೆಪಿಗೆ ಸಮರ್ಥ ಎದುರಾಳಿ ಎನ್ನುವುದನ್ನು ಗ್ರಹಿಸಲು ಅಲ್ಪಸಂಖ್ಯಾತ ಸಮುದಾಯ ಸಂಪೂರ್ಣ ವಿಫಲವಾದಂತಿದೆ.

ರಾಜ್ಯದಲ್ಲಿ ಶೇ 20 ರಷ್ಟಿರುವ ಮುಸ್ಲಿಂ ಮತಗಳು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ನಡುವೆ ಹಂಚಿಕೆಯಾದಂತಿದೆ. ಬಿಜೆಪಿ ನಾಯಕರು ಹೇಳುವಂತೆ ಮುಸ್ಲಿಮರ ಮತಗಳೂ ಆ ಪಕ್ಷಕ್ಕೆ ಬಿದ್ದಿವೆಯಂತೆ. ತಮಿಳುನಾಡಿನಲ್ಲಿ ಎಐಎಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಒಡಿಶಾದಲ್ಲಿ  ನವೀನ್‌ ಪಟ್ನಾಯಕ್‌ ಜಯಭೇರಿ ಬಾರಿಸಿದ ಸಂದರ್ಭದಲ್ಲೇ ಸಮಾಜವಾದಿ ಪಕ್ಷ ಪೆಚ್ಚು ಮೋರೆ ಹಾಕಿಕೊಂಡಿದೆ.

ಬಿಹಾರದಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಗರ್ವಭಂಗವಾಗಿದೆ. ‘ಗುಜರಾತಿಗಿಂತ ಬಿಹಾರದ ಅಭಿವೃದ್ಧಿ ಮಾದರಿ ಉತ್ಕೃಷ್ಟ’ ಎಂದು ನಿತೀಶ್‌ ಕುಮಾರ್‌ ಪ್ರತಿಪಾದಿಸಿದ್ದರು. ಆರ್ಥಿಕ ತಜ್ಞರು, ಮಾಧ್ಯಮಗಳು, ಸಾಮಾಜಿಕ ಸಂಘ– ಸಂಸ್ಥೆಗಳು ಬಿಹಾರ ಸರ್ಕಾರವನ್ನು ಹಾಡಿ ಹೊಗಳಿದ್ದವು. ಜನ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಜೆಡಿಯು ಏಕಾಂಗಿ: ನಿತೀಶ್‌ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ, ರಾಜ್ಯದ ಜನರಿಗೆ ಅದರಿಂದ ಸಮಾಧಾನವಾಗಿಲ್ಲ.  ಬಿಜೆಪಿ ಮೈತ್ರಿ ತೊರೆದ ಬಳಿಕ ಜನತಾದಳ (ಸಂಯುಕ್ತ) ಬೇಕಾದಷ್ಟು ಸಮಸ್ಯೆಗಳನ್ನು ಎದುರಿಸಿದೆ. ಅನೇಕ ಮುಖಂಡರು ಪಕ್ಷ ತೊರೆದಿದ್ದಾರೆ. ಕೆಲವು ಸಚಿವರು ರಾಜೀನಾಮೆ ಕೊಟ್ಟು ಹೊರ ಹೋಗಿ­ದ್ದಾರೆ.  ಜೆಡಿಯು ಏಕಾಂಗಿಯಾಗಿದೆ. ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಭವಿಷ್ಯಕ್ಕೂ ಆತಂಕ ತಂದೊಡ್ಡುವ ಅಪಾಯ ತಳ್ಳಿಹಾಕಲಾಗದು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿರುವ ಹಿನ್ನೆಲೆಯಲ್ಲಿ ಜೆಡಿಯು ಸರ್ಕಾರ ಎಚ್ಚರಿಕೆಯಿಂದ ಮುನ್ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಅವರಿಗೆ ಸರಿಸಮನಾಗಿ ನಿಲ್ಲುವ ನಾಯಕ ಎಂದು ನಿತೀಶ್‌ ಅವರನ್ನು ಅನೇಕ ಸಂದರ್ಭದಲ್ಲಿ ಬಣ್ಣಿಸಲಾಗಿತ್ತು. ಮೋದಿ– ನಿತೀಶ್‌ ಅವರನ್ನು ಹೋಲಿಕೆ ಮಾಡಿ ವಿಶ್ಲೇಷಿಸಲಾಗಿತ್ತು. ಬಿಹಾರ ಜನ ನಿತೀಶ್‌ ಯಾವ ರೀತಿಯಲ್ಲೂ ಮೋದಿ ಅವರಿಗೆ ಸರಿಸಮರಲ್ಲ ಎಂದು ತೀರ್ಪು ನೀಡಿದ್ದಾರೆ.

ತಲೆಕೆಳಗಾದ ಲಾಲೂ – ಕಾಂಗ್ರೆಸ್‌ ಲೆಕ್ಕಾಚಾರ: ಲಾಲೂ ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಜನತಾದಳ– ಕಾಂಗ್ರೆಸ್‌ ಮೈತ್ರಿ ಕೂಟವು ಮೋದಿ ಓಟಕ್ಕೆ ಕಡಿವಾಣ ಹಾಕಲು ಸೋತಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ ಹೆಚ್ಚು ಕಡಿಮೆ ಬಿಜೆಪಿಗೆ ಸರಿಸಮಾನ ಪೈಪೋಟಿ ನೀಡಬಹುದೆಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿತ್ತು.

ಈ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ರಾಮ್‌ವಿಲಾಸ್‌ ಪಾಸ್ವಾನ್‌ ಮಾತ್ರ ಎನ್‌ಡಿಎ ಜತೆ ಸೇರಿ ತಮ್ಮ ಪಕ್ಷದ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಹಾಗೆಯೇ ಜೆಡಿಯು ಒಡಲಿಂದ ಹೊರ ಬಂದ ರಾಷ್ಟ್ರೀಯ ಲೋಕ ಸಮತಾ ಪಕ್ಷವೂ ಬಿಜೆಪಿ ಆಶ್ರಯದಲ್ಲಿ ಸುರಕ್ಷಿತವಾಗಿದೆ.

ಬಿಜೆಪಿ ಜಯಭೇರಿ: ಮಧ್ಯ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಮುಂದುವರಿದಿದೆ. ಕೇಂದ್ರ ಸಚಿವರಾದ ಕಮಲ್‌ನಾಥ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹೊರತುಪಡಿಸಿದರೆ ಮತ್ಯಾವ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿಲ್ಲ. ಕಳೆದ ವರ್ಷ ಕೊನೆಯಲ್ಲಿ ನಡೆದ ವಿಧಾನಸಭೆ ಚುನಾವಣೆಯ ಗೆಲುವು ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಪಕ್ಷವನ್ನು ದಡ ಮುಟ್ಟಿಸಿದ್ದಾರೆ. ರಾಜ್ಯದಾದ್ಯಂತ ಸುಮಾರು 150ಕ್ಕೂ ಹೆಚ್ಚು ಸಭೆಗಳನ್ನು ಅವರು ನಡೆಸಿದ್ದಾರೆ.

ವಿಧಾನಸಭೆ ಚುನಾವಣೆ ಸೋಲಿನಿಂದ ಕಾಂಗ್ರೆಸ್‌ ಮುಖಂಡರು ಪಾಠ ಕಲಿತಿಲ್ಲ. ಲೋಕಸಭೆ ಚುನಾವಣೆಯನ್ನು ಒಗ್ಗೂಡಿ ಎದುರಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ವಿಫಲವಾಗಿದ್ದಾರೆ. ದಿಗ್ವಿಜಯ್‌ ಸಿಂಗ್‌, ಕಮಲನಾಥ್‌ ಹಾಗೂ ಸಿಂಧಿಯಾ ಬಣಗಳು ಗುಂಪುಗಾರಿಕೆ ಮುಂದುವರಿಸಿವೆ.

ಛತ್ತೀಸ್‌ಗಡ ಕಾಂಗ್ರೆಸ್‌ ಸ್ಥಿತಿ ಅಯೋಮಯ. ದುರ್ಗ್‌ ಮತ್ತು ಮಹಾಸಮುಂದ್‌ ಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಕಾಂಗ್ರೆಸ್‌ ಅಭ್ಯರ್ಥಿಗಳು ಹೋರಾಟ ಮುಂದುವರಿಸಿದ್ದಾರೆ. ಉಳಿದೆಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಪ್ರಾಬಲ್ಯ ಮುಂದುವರಿದಿದೆ.

ಜಾರ್ಖಂಡ್‌ ಕೂಡಾ ಬಿಜೆಪಿಗೆ ತೆಕ್ಕೆಗೆ ಜಾರಿದೆ. ಬಿಜೆಪಿ ಈ ರಾಜ್ಯದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸಲು ಜೆಎಂಎಂ– ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅದೇ ಕಾರಣಕ್ಕೆ ಜನ ಮೈತ್ರಿಕೂಟಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಏಕಾಂಗಿಯಾಗಿ ಬಿಜೆಪಿಯನ್ನು ಗೆಲ್ಲಿಸಿ­ದ್ದಾರೆ. ಸಮರ್ಥ ನಾಯಕತ್ವವಿಲ್ಲದೆ ಸೊರಗಿದ ಕಾಂಗ್ರೆಸ್‌ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.