ADVERTISEMENT

ರಾಹುಲ್‌ ನೇತೃತ್ವಕ್ಕೆ ಹೀನಾಯ ಸೋಲು

​ಪ್ರಜಾವಾಣಿ ವಾರ್ತೆ
Published 17 ಮೇ 2014, 6:51 IST
Last Updated 17 ಮೇ 2014, 6:51 IST

ಅಲಹಾಬಾದ್‌ನ ಮೋತಿಲಾಲ್‌ ನೆಹರು ಎಂಬ ಹೆಸರಿನ ವಕೀಲ 1906ರಲ್ಲಿ, ಹ್ಯಾರೋ ಶಾಲೆಯಲ್ಲಿ ಕಲಿಯುತ್ತಿದ್ದ ತಮ್ಮ ಮಗ ಜವಾಹರಲಾಲನಿಗೆ ಹೀಗೆ ಬರೆದರು: ‘ಬಹುಶಃ ನೆಹರು ವಂಶದ ಸ್ಥಾಪಕ ನಾನು ಎಂದು ಜಂಭವಿಲ್ಲದೆ  ಹೇಳಿಕೊಳ್ಳಬಹುದು. ಪ್ರೀತಿಯ ಮಗನೇ, ನಾನು ಹಾಕಿರುವ ಅಡಿಪಾಯದ ಮೇಲೆ ನೀನು ಕೀರ್ತಿಯ ಸೌಧ ಕಟ್ಟಿ, ಅದು ಗಗನಮುಖಿ ಆಗುವುದನ್ನು ಕಂಡು ತೃಪ್ತಿಪಡಬೇಕು’.

ಮೋತಿಲಾಲ್‌ ಬರೆದ ಆ ಮಾತು ಭವಿಷ್ಯವಾಣಿ­ಯಂತೆ ಇತ್ತು. ಸುಮಾರು ಒಂದು ಶತಮಾನ­ದಷ್ಟು ಅವಧಿ ಅವರ ವಂಶಸ್ಥರು ಭಾರತದ ರಾಜಕೀಯ­ದಲ್ಲಿ ಪ್ರಭಾವಶಾಲಿಗಳಾ­ಗಿಯೂ ಪ್ರಬಲ­­ರಾಗಿಯೂ ಮೆರೆದರು. ನೆಹರು ವಂಶವು ಮೂವರು ಪ್ರಧಾನಿಗಳು ಹಾಗೂ ಐವರು ಕಾಂಗ್ರೆಸ್‌ ಅಧ್ಯಕ್ಷರನ್ನು ನೀಡಿತು. ಈಗ ಆ ವಂಶದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. 2014ರ ಸಾಮಾನ್ಯ ಚುನಾ­ವಣೆಯಲ್ಲಿ ನೆಹರು–ಗಾಂಧಿ ವಂಶಕ್ಕೆ ಪರಾ­ಜಯವಾಗಿದೆ ಎನ್ನುವುದು ಸ್ಪಷ್ಟ. ಒಂದು ಕಾಲ­ದಲ್ಲಿ ಸಂಸತ್‌ನಲ್ಲಿ ಸ್ಪಷ್ಟ ಬಹುಮತ ಪಡೆಯು­ವುದಕ್ಕೆ ಹೆಸರಾಗಿದ್ದ, ಅವರ ಕಾಂಗ್ರೆಸ್‌ ಪಕ್ಷ 100ಕ್ಕೂ ಕಡಿಮೆ ಸ್ಥಾನಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ.

ಕಾಂಗ್ರೆಸ್‌ನ ಸ್ವಭಾವತಃ ಭಟ್ಟಂಗಿಗಳಾಗಿರುವ ಕೆಲವರು ಈ ಪರಾಜಯವನ್ನು ಒಟ್ಟಾರೆ ನಾಯಕತ್ವದ ವೈಫಲ್ಯ, ಒಕ್ಕೂಟ ಸರ್ಕಾರದ ವೈಫಲ್ಯ, ಮಾಧ್ಯಮಗಳು ಕೆಟ್ಟದ್ದಾಗಿ ಬಿಂಬಿಸಿದ್ದ­ರಿಂದ ಆದ ವೈಫಲ್ಯ ಎಂದೆಲ್ಲಾ ಹೇಳುತ್ತಿದ್ದಾ­ರೆಯೇ ವಿನಾ ಇದು ರಾಹುಲ್‌ ಗಾಂಧಿ ಅವರ ವೈಫಲ್ಯ ಎಂದು ಹೇಳುತ್ತಿಲ್ಲ.

ಭ್ರಷ್ಟಾಚಾರದ ಹಗರಣಗಳು ಹಾಗೂ ಆರ್ಥಿಕ ಹಿನ್ನಡೆಯಿಂದಾಗಿ ಮತದಾರನು ಅಧಿಕಾರದಲ್ಲಿದ್ದ ಪಕ್ಷದ ಕಡೆಗೆ ಒಲವು ವ್ಯಕ್ತಪಡಿಸಲಿಲ್ಲ ಎನ್ನುವುದೇನೋ ನಿಜ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿದವರಾಗಿ ಪಕ್ಷದ ಉಪಾಧ್ಯಕ್ಷರು ಸೋಲಿನ ಹೊಣೆಯ ಪಾಲನ್ನು ಸ್ವೀಕರಿಸಲೇಬೇಕು. ರಾಹುಲ್‌ ಗಾಂಧಿ ಪ್ರಚಾರದ ನೇತೃತ್ವವನ್ನು ವಹಿಸಿಕೊಳ್ಳದೇ ಇದ್ದಿದ್ದರೆ ಕಾಂಗ್ರೆಸ್‌ ಇಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲವೇನೋ?

2009ರ ಸಾಮಾನ್ಯ ಚುನಾವಣೆಯಲ್ಲಿ ಪಕ್ಷದ ಪೋಸ್ಟರ್‌ಗಳಲ್ಲಿ ಮೂರು ಮುಖಗಳಿದ್ದವು: ಪ್ರಧಾನಿ, ಪಕ್ಷದ ಅಧ್ಯಕ್ಷ ಹಾಗೂ ಮುಖ್ಯ ವಾರಸುದಾರ. ಈ ಸಲ ಪೋಸ್ಟರ್‌ಗಳಲ್ಲಿ ಮನಮೋಹನ್‌ ಸಿಂಗ್‌ ಹಾಗೂ ಸೋನಿಯಾ ಗಾಂಧಿ ಮುಖಗಳು ಕಾಣಿಸಲಿಲ್ಲ. ಪೋಸ್ಟರ್‌ಗಳ ಮಧ್ಯಭಾಗದಲ್ಲಿ ರಾಹುಲ್‌ ಗಾಂಧಿ ಅವರ ಚಿತ್ರವಿತ್ತು. ಅವರ ಸುತ್ತ ಇದ್ದದ್ದು ಅಪರಿಚಿತ ಭಾರತೀಯರ ಚಿತ್ರಗಳು. ತಲೆಗೆ ಪಗಡಿ ಸುತ್ತಿಕೊಂಡ ಸಿಖ್‌ ಹುಡುಗ, ಹೆಡ್‌ಸ್ಕಾರ್ಫ್‌ ತೊಟ್ಟ ಮುಸ್ಲಿಂ ಹುಡುಗಿ, ಧೋತಿ ಉಟ್ಟ ಆದಿವಾಸಿ– ಹೀಗೆ ವಿವಿಧ ಧರ್ಮ, ಸಮುದಾಯಗಳನ್ನು ಸೂಚಿಸುವವರ ಚಿತ್ರಗಳು ರಾಹುಲ್‌ ಚಿತ್ರದ ಸುತ್ತ ಇದ್ದವು.

ರಾಹುಲ್‌ ಗಾಂಧಿ ಅವರ ತಾಯಿ, ತಂದೆ, ಅಜ್ಜಿ, ಮುತ್ತಜ್ಜ ಎಲ್ಲರೂ ಚುನಾವಣಾ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ತಮ್ಮ ಹಿಂದಿನ ತಲೆಮಾರಿನ ಇವರೆಲ್ಲಾ ಯಶಸ್ವಿಯಾಗಿದ್ದರೂ ರಾಹುಲ್‌ ವಿಫಲರಾದದ್ದು ಯಾಕೆ? ಇದಕ್ಕೆ ಎರಡು ಮೂಲ ಕಾರಣಗಳಿವೆ. ಅವುಗಳೆಂದರೆ, ಅವರ ವೈಯಕ್ತಿಕ ಅಸಾಮರ್ಥ್ಯ ಹಾಗೂ ಸಾಮಾಜಿಕ ಕಾರಣಗಳು. ಇವುಗಳ­ಿಂದಾಗಿ, ನೆಹರು–ಗಾಂಧಿ ಕುಟುಂಬವು ಕ್ರಮೇಣ ಜನಾಕರ್ಷಣೆ ಕಳೆದುಕೊಳ್ಳತೊಡಗಿತು.

ನೆಹರು–ಗಾಂಧಿಗಳ  ಆಕರ್ಷಣೆ ಕುಗ್ಗಿರುವುದ­ರಿಂದ, ಒಂದು ಕಾಲದಲ್ಲಿ ಆ ಶಕ್ತಿ ಅಷ್ಟು ಉನ್ನತ ಮಟ್ಟದಲ್ಲಿ ಇದ್ದದ್ದು ಹೇಗೆ ಎಂದು ನಾವು ಸ್ಮರಿಸಿಕೊಳ್ಳುವುದು ಒಳ್ಳೆಯದು. ಭಾರತದ ಮೊದಲ ಹಾಗೂ ಸುದೀರ್ಘ ಕಾಲ ಅಧಿಕಾರದ-­ಲ್ಲಿದ್ದ ಪ್ರಧಾನಿಯಾಗಿ ಜವಾಹರಲಾಲ್‌ ನೆಹರು ಪ್ರಜಾಸತ್ತಾತ್ಮಕ ಹಾಗೂ ಐಕಮತ್ಯದ ಭಾರತದ ನಿರ್ಮಾಣಕ್ಕೆ ಸೂಕ್ತವಾದ ಅಡಿಪಾಯ ಹಾಕಲು ನೆರವಾದರು. ಧಾರ್ಮಿಕ ಹಾಗೂ ಭಾಷಾ ಸ್ವಾತಂತ್ರ್ಯ­ವನ್ನು ಉತ್ತೇಜಿಸಿದರು, ಆಧುನಿಕ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದರು, ಅಧಿಕಾರಿ­ವರ್ಗ ಹಾಗೂ ನ್ಯಾಯಾಂಗದ ಸ್ವಾಯತ್ತತೆಯನ್ನು ಗೌರವಿಸಿದರು. ಅವರ ಆರ್ಥಿಕ ಹಾಗೂ ವಿದೇಶಾಂಗ ನೀತಿಗಳು ವಿವಾದಾಸ್ಪದವಾದರೂ, ದೇಶದ ವಿಷಯದಲ್ಲಿ ಇದ್ದ ಅವರ ಬದ್ಧತೆ ಪ್ರಶ್ನಾತೀತವಾದದ್ದು.

‘ನೆಹರು ತಮ್ಮದೇ ಸಾಮ್ರಾಜ್ಯ ಕಟ್ಟುವ ಪ್ರಯತ್ನ ಮಾಡಿದ್ದರು ಎನ್ನುವುದು ಸರಿಯಲ್ಲ. ಅದು ಅವರ ವ್ಯಕ್ತಿತ್ವ ಹಾಗೂ ವೃತ್ತಿಯಲ್ಲಿ ಅಸಂಗತವಾಗಿ ಇತ್ತು’  ಎಂದು 1960ರಲ್ಲಿ ಪ್ರಕಟ­ವಾದ ಪುಸ್ತಕವೊಂದರಲ್ಲಿ ಫ್ರಾಂಕ್‌ ಮೊರೇಸ್‌ ಉಲ್ಲೇಖಿಸಿದ್ದರು. ನೆಹರು 1964ರಲ್ಲಿ ನಿಧನ­ರಾದ ನಂತರ ಅವರ ಪುತ್ರಿ ಇಂದಿರಾಗಾಂಧಿ ಅವರಿಗೆ ಇದ್ದದ್ದು ಖಾಸಗಿ ಬದುಕಷ್ಟೆ. ಆಗ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಪ್ರಧಾನಿಯಾದರು. ಉದಾತ್ತ ಮನಸ್ಸಿನಿಂದ ಅವರು ಇಂದಿರಾಗಾಂಧಿಯವರನ್ನು ತಮ್ಮ ಸಚಿವಸಂಪುಟಕ್ಕೆ ಸೇರಿಸಿಕೊಂಡರು. 1966­ರಲ್ಲಿ ಶಾಸ್ತ್ರಿ ಅವರ ಅಕಾಲಿಕ ಮರಣಾನಂತರ ಕಾಂಗ್ರೆಸ್‌ ಮುಖಂಡರು ನೆಹರು ಪುತ್ರಿಯನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದರು. ಇಬ್ಬರು ಪ್ರಧಾನಿಗಳು ಎರಡೇ ವರ್ಷಗಳ ಅವಧಿಯಲ್ಲಿ ಅಸುನೀಗಿದ್ದರಿಂದ ದೇಶದಲ್ಲಿ ಇದ್ದ ದುಗುಡವನ್ನು ಹೋಗಲಾಡಿಸುವ ಏಕತೆಯ ಸಂಕೇತದಂತೆ ಇಂದಿರಾ ಆಗ ಅವರಿಗೆ ಕಂಡರು.

ಅಧಿಕಾರದಲ್ಲಿ ಇದ್ದಾಗ ಇಂದಿರಾ ಗಾಂಧಿ ಮೂಲಸೌಕರ್ಯ ಇಲ್ಲದವರ ಚಾಂಪಿಯನ್‌ ಆಗಿ ತಮ್ಮನ್ನು ತಾವು ರೂಪಿಸಿಕೊಂಡರು. ಬ್ಯಾಂಕ್‌­ಗಳನ್ನು ರಾಷ್ಟ್ರೀಕೃತಗೊಳಿಸಿದರು ಹಾಗೂ ಪುಂಖಾ­ನು­ಪುಂಖವಾಗಿ ಕಲ್ಯಾಣರಾಜ್ಯವಾದಿ ಯೋಜನೆ­ಗಳನ್ನು ಜಾರಿಗೆ ತಂದರು. ಅವೆಲ್ಲಕ್ಕಿಂತ ಮಿಗಿಲಾಗಿ, 1970–71ರಲ್ಲಿ ಪೂರ್ವ ಪಾಕಿಸ್ತಾನದ ಬಿಕ್ಕಟ್ಟನ್ನು ಬಗೆಹರಿಸಿದ ರೀತಿ ಅವರ ಶ್ರೇಷ್ಠ ಸಾಧನೆ ಎನಿಸಿಕೊಂಡಿತು. ಪೂರ್ವ ಪಾಕಿಸ್ತಾನದಲ್ಲಿ ನಿರಾಶ್ರಿ­ತರಾದವರಿಗೆ ಭಾರತ ಆಶ್ರಯ ಕೊಡುವಂತೆ ಮಾಡಿದ್ದಲ್ಲದೆ, ಮಿಲಿಟರಿ ಮಧ್ಯಪ್ರವೇಶದ ಮೂಲಕ ಸ್ವತಂತ್ರ ಬಾಂಗ್ಲಾದೇಶ ರೂಪು­ಗೊಳ್ಳಲು ಸಹಾಯ ಮಾಡಿದರು.

ತಮ್ಮದೇ ಸಾಮ್ರಾಜ್ಯ ಕಟ್ಟುವ ವಿಷಯದಲ್ಲಿ ತಮ್ಮ ತಂದೆ ನೆಹರು ಅವರಿಗೆ ಇದ್ದ ದ್ವಂದ್ವ ಇಂದಿರಾ ಗಾಂಧಿ ಅವರಿಗೆ ಇರಲಿಲ್ಲ. 1975–76ರ ಕುಖ್ಯಾತ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಪುತ್ರ ಸಂಜಯ್‌, ಅವರಿಗೆ ಆಪ್ತ ಸಲಹೆಗಾರ ಆಗಿದ್ದರು. ಅಷ್ಟೇ ಅಲ್ಲ, 1980ರ ಜೂನ್‌ನಲ್ಲಿ ಸಂಜಯ್‌ ಮೃತಪಟ್ಟಾಗ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಜಯ್‌ ಅಕಾಲ ಮರಣದ ನಂತರ ಇಂದಿರಾ ಗಾಂಧಿ ತಮ್ಮ ಇನ್ನೊಬ್ಬ ಮಗ, ವಿಮಾನದ ಪೈಲಟ್‌ ಆಗಿದ್ದ ರಾಜೀವ್‌ ಅವರನ್ನು ರಾಜಕೀಯಕ್ಕೆ ಕರೆತಂದರು. 1984ರಲ್ಲಿ ಇಂದಿರಾ ಹತ್ಯೆಯಾದ ನಂತರ ರಾಜೀವ್‌ ಪ್ರಧಾನಿ­ಯಾದರು. ಆ ಸ್ಥಾನದಲ್ಲಿ ಅವರ ಕಾರ್ಯವೈಖರಿ ಮಿಶ್ರ ರೀತಿಯಲ್ಲಿ ಇತ್ತು. ತಾಂತ್ರಿಕ ಆಧುನೀಕರಣ ಹಾಗೂ ಚೀನಾ ಜೊತೆ ಸಂಬಂಧ ಸುಧಾರಣೆ ಆಗುವಂತೆ ಒಂದೆಡೆ ಮಾಡಿದರೆ, ಇನ್ನೊಂದೆಡೆ ಮುಸ್ಲಿಂ ಹಾಗೂ ಹಿಂದೂ ಮೂಲಭೂತವಾದಿ­ಗಳಿಗೆ ಗುಪ್ತವಾಗಿ ಕುಮ್ಮಕ್ಕು ಕೊಟ್ಟರು.

ರಾಜೀವ್‌ ಗಾಂಧಿ 1991ರಲ್ಲಿ ಹತ್ಯೆಗೀಡಾ­ದರು. ಏಳು ವರ್ಷಗಳ ನಂತರ ಅವರ ಪತ್ನಿ ಸೋನಿಯಾ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಆಯ್ಕೆ­ಯಾದರು. ಅಲ್ಲಿಂದಾಚೆಗೆ ಅವರು ತಮ್ಮ ಪತಿ ಹಾಗೂ ಅತ್ತೆಯ ಆರಾಧಕರನ್ನು ಬೆಂಬಲಿಸುತ್ತಾ ಬಂದರು. ದೇಶಕ್ಕಾಗಿ ತಮ್ಮ ಪತಿ, ಅತ್ತೆ ಮಾಡಿದ ತ್ಯಾಗ, ಬಲಿದಾನ ಹಾಗೂ ಅವರಿಬ್ಬರ ಬರ್ಬರ ಹತ್ಯೆಗಳನ್ನು ನೆನಪಿಸುತ್ತಾ ಭಾರತೀಯರು ತಮ್ಮ ವಂಶಕ್ಕೆ, ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠರಾಗಿ ಇರಬೇಕೆಂದು ಕರೆಕೊಟ್ಟರು. ಅವರು ಕೊಟ್ಟ ಕರೆ ಎಷ್ಟು ತೆಳುವಾಗಿತ್ತೆಂದರೆ, ಮತದಾರ ಸಮೂಹ­ದಲ್ಲಿ ಇದ್ದ ಯುವಕರಿಗೆ ನೆಹರು–ಗಾಂಧಿಗಳ ಸಾಧನೆ ಏನು ಎನ್ನುವುದೇ ನೆನಪಾಗಲಿಲ್ಲ.

ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಚಲನಶೀಲತೆ ಭಾರತದ ಯುವಜನತೆಯ ಚಿಂತನೆ, ವರ್ತನೆಗಳನ್ನು ಸಂಪೂರ್ಣವಾಗಿ ಬದಲಾಯಿಸಿತು. ಗೌರವಭಾವನೆಯಿಂದ ಪ್ರಶ್ನಿಸದ ಮನಸ್ಥಿತಿ ಈ ಯುವಜನತೆಯದ್ದಲ್ಲ. ಅವರ ವಂಶಸ್ಥರ ಸಾಧನೆ­ಗಳು ಹಾಗಿರಲಿ, ರಾಹುಲ್‌ ಗಾಂಧಿ ಕೊಡುಗೆ­ಯೇನು ಎಂದು ಪ್ರಶ್ನಿಸುವ ಜಾಯಮಾ­ನದ ಯುವ­­ಜನತೆ ಇದು. ರಾಹುಲ್‌ ಕೊಡುಗೆ ಕೆಲವೇ ಕೆಲವು. ಸಂಸತ್‌ನಲ್ಲಿ ಎರಡು ಅವಧಿಯಲ್ಲಿ ರಾಹುಲ್‌ ಮಾತನಾಡಿರುವುದೇ ಅಪರೂಪ. ಕ್ಯಾಬಿನೆಟ್‌ ಹುದ್ದೆ ಅಲಂಕರಿಸಲೂ ಹಿಂಜರಿದಿ­ದ್ದವರು ಅವರು.

ಐಷಾರಾಮಿ  ವಾತಾವರಣದಲ್ಲಿ ರಾಹುಲ್‌ ಗಾಂಧಿ ಬೆಳೆದದ್ದು ಹಾಗೂ ಅವರಿಗೆ ಇರುವ ಆಡ­ಳಿತದ ಅನನುಭವವನ್ನು ಗುರಿಯಾಗಿಸಿ ನರೇಂದ್ರ ಮೋದಿ ಪದೇಪದೇ ಚುನಾವಣಾ ಭಾಷಣ­­ಗಳನ್ನು ಮಾಡಿದರು. ತಾವು ಕಷ್ಟಪಟ್ಟು ಮೇಲೆ ಬಂದು ಗುಜರಾತ್‌ ಮುಖ್ಯಮಂತ್ರಿ­ಯಾದ ಬಗೆಯನ್ನು ಹೇಳಿ, ಗಮನ ಸೆಳೆದರು. ಈ ನಡುವೆ, ರಾಹುಲ್‌ ಗಾಂಧಿ ಕೌಟುಂಬಿಕ ಹಿನ್ನೆಲೆಯೇ ಅವರು ಮೋದಿ­ಯವರ ದೊಡ್ಡ ದೌರ್ಬಲ್ಯವನ್ನು ಎತ್ತಿ ತೋರ­ದಂತೆ ಮಾಡಿತು. 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ಹತ್ಯಾಕಾಂಡ ತಡೆಗಟ್ಟಲು ರಾಹುಲ್‌ ಅವರ ತಂದೆ ಏನೇನೂ ಪ್ರಯತ್ನ ಮಾಡಿರಲಿಲ್ಲ. ಹಾಗಾಗಿ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡವನ್ನು ಇಟ್ಟುಕೊಂಡು ರಾಹುಲ್‌ ದೊಡ್ಡ ದನಿಯಲ್ಲಿ ಮೋದಿಯವರನ್ನು ಟೀಕಿಸಲು ಆಗಲಿಲ್ಲ.

1885 ಹಾಗೂ 1975ರ ನಡುವೆ ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್‌ ಒಟ್ಟಾರೆ­ಯಾಗಿ ಅಭಿವೃದ್ಧಿಶೀಲ ಪಾತ್ರ ನಿರ್ವಹಿಸಿದೆ. ಆ ಪಕ್ಷದವರೇ ಆದ ಗೋಖಲೆ, ಗಾಂಧಿ, ನೆಹರು ಹಾಗೂ ಪಟೇಲ್‌, ಸಾಮಾಜಿಕ ಮತ್ತು ಧಾರ್ಮಿಕ ವಿಭಜನೆಯನ್ನು ಮೀರಿ ದೇಶವನ್ನು ಮೇಲೆತ್ತಿದರು. ಸ್ವಾತಂತ್ರ್ಯಕ್ಕೆ ಮೊದಲು ಹಾಗೂ ನಂತರ ಕಾಂಗ್ರೆಸ್‌ ಸಾಮಾಜಿಕ ಸಮಾನತೆ ಹಾಗೂ ಸಾಂಸ್ಕೃತಿಕ ಬಹುತ್ವವನ್ನು ಉತ್ತೇಜಿಸಿತು. ಬೇರು ಬಿಟ್ಟಿದ್ದ ಜಾತಿ, ಲಿಂಗ ಆಧಾರಿತ ಶ್ರೇಣಿ ವ್ಯವಸ್ಥೆಯನ್ನು ಕಾಂಗ್ರೆಸ್‌ನ ಶ್ರೇಷ್ಠ ನಾಯಕರು ಪ್ರಶ್ನಿಸಿದರು. ಹೊಸ ಸಿದ್ಧಾಂತಗಳನ್ನು, ಹೊಸ ತಂತ್ರಜ್ಞಾನ­ಗಳನ್ನು ಅಳವಡಿಸಿಕೊಂಡರು.

ಹೀಗಿದ್ದ ಕಾಂಗ್ರೆಸ್‌ 1975ರ ನಂತರ ವಂಶ­ಪಾರಂಪರಿಕ ಸಂಸ್ಥೆಯಾಗಿ ಪರಿವರ್ತಿತವಾಯಿತು. ಇದರಿಂದಾಗಿ ಪಕ್ಷದ ವಿಶ್ವಾಸಾರ್ಹತೆಗೆ ಪೆಟ್ಟು ಬಿತ್ತು. ರಾಜಕೀಯ ಬದುಕು ಕಟ್ಟಿಕೊಳ್ಳಲು ಬಯ­ಸುವ ಪ್ರತಿಭಾವಂತ ವ್ಯಕ್ತಿಗಳು ಆ ಪಕ್ಷಕ್ಕೆ ಸೇರಲು ಹಿಂದುಮುಂದು ನೋಡುವ ಪರಿಸ್ಥಿತಿ ಸೃಷ್ಟಿಯಾ­ಯಿತು. ಯಾಕೆಂದರೆ, ಪಕ್ಷದ ಮುಖಂಡರಾದ ನೆಹರು–ಗಾಂಧಿಗಳ ಪೋಷಣೆಯನ್ನೇ ಪಕ್ಷದ ಇತರ ರಾಜಕಾರಣಿಗಳ ಬೆಳವಣಿಗೆ ಅವಲಂಬಿಸುವ ಸ್ಥಿತಿ ನಿರ್ಮಾಣವಾಯಿತು.

ಒಟ್ಟಾರೆಯಾಗಿ ನೋಡಿದರೆ, ರಾಹುಲ್‌ ಗಾಂಧಿ ಇಷ್ಟಪಡಬಹುದಾದ ವ್ಯಕ್ತಿಯೇ. ಆದರೆ ರಾಜಕೀಯ ನಾಯಕರಾಗಿ ನಿಶ್ಚಿತ ಅಭಿಪ್ರಾಯ ತೆಗೆದು­ಕೊಳ್ಳುವಲ್ಲಿ ಅವರು ಹಿಂದೆ ಇದ್ದಾರೆ. ಸ್ವಾತಂತ್ರ್ಯ ಹೋರಾಟ ಹಾಗೂ ಬಹು ಪಕ್ಷಗಳ ಪ್ರಜಾ­­ಪ್ರಭುತ್ವ ಬದ್ಧತೆಯಿಂದಾಗಿ ನೆಹರು ಮೆಚ್ಚುಗೆ ಗಳಿಸಿದರು. ಮುಂಚೂಣಿಯಲ್ಲಿ ನಿಂತು ಪಕ್ಷ ಮುನ್ನಡೆಸುವ ನಾಯಕತ್ವದ ಗುಣ ಹಾಗೂ ಬಡವರ ಪರವಾದ ದೃಷ್ಟಿಕೋನದಿಂದಾಗಿ ಇಂದಿರಾ ಗಾಂಧಿಗೂ ಮೆಚ್ಚುಗೆ ಸಂದಿತು. ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ನೀಡಿ ರಾಜೀವ್‌ ಗಾಂಧಿ ಗಮನ ಸೆಳೆದರು. ಕಠಿಣ ಕೆಲಸಕ್ಕೆ ಸೋನಿಯಾ ಹೆಸರಾದರು. ಕಾಂಗ್ರೆಸ್‌ನವರನ್ನೇ ಮಾತನಾಡಿಸಿ­ದರೆ, ಆ ಪಕ್ಷದೊಳಗೆ ಗೌರವ ಸಂಪಾದಿಸಲು ಸಾಧ್ಯವಾಗದ ನೆಹರು ಕುಟುಂಬದ ಮೊದಲ ವ್ಯಕ್ತಿ ರಾಹುಲ್‌ ಎನ್ನುವುದು ಗೊತ್ತಾಗುತ್ತದೆ.

ಜನವರಿ 2013ರಲ್ಲಿ, ನನ್ನ ಅಂಕಣಗಳಲ್ಲಿ ‘ರಾಹುಲ್‌ ಗಾಂಧಿ ಒಲ್ಲದ ಮನಸ್ಸಿನ, ವೈಶಿಷ್ಟ್ಯವ­ಿಲ್ಲದ, ಮಂತ್ರಿ ಜವಾಬ್ದಾರಿ ನಿರ್ವಹಿಸುವ ಆತ್ಮ­ವಿಶ್ವಾಸ­ವಿಲ್ಲದ ಅಥವಾ ಅಂಜುಬುರುಕ ಸ್ವಭಾವದ ಹಾಗೂ ತಮ್ಮ ಪಕ್ಷಕ್ಕೆ ಮತಗಳನ್ನು ಗೆದ್ದುಕೊಡ­ಬಲ್ಲ ಪರಿಣಾಮಕಾರಿ ವ್ಯಕ್ತಿತ್ವವಿಲ್ಲದ ಸಂಸದೀಯ’ ಎಂದು ಬರೆದಿದ್ದೆ. ಹಾಗೆ ನೋಡಿ­ದರೆ, ಆಗಲೇ ಕಾಂಗ್ರೆಸ್‌ ಪಕ್ಷದ ಬೆಂಬಲಿ­ಗರಿಗೆ ರಾಹುಲ್‌ ಮಿತಿಗಳೇನು ಎನ್ನುವುದಕ್ಕೆ ಸಾಕ್ಷಿಗಳು ಸಿಕ್ಕಿದ್ದವು. ಆದರೆ ಪಕ್ಷದ ಅಧ್ಯಕ್ಷರಿಗೆ ಇದು ಮನನವಾಗಲಿಲ್ಲ. ತಮ್ಮ ಮಗನೇ ಏಕಾಂಗಿಯಾಗಿ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಲಿ ಎಂದು ನಿರ್ಧರಿಸಿದರು.

ಆ ನಿರ್ಧಾರದ ಫಲಿತಾಂಶ ಈಗ ಸ್ಪಷ್ಟ ಸಾಕ್ಷಿ­ಯಂತೆ ಕಾಣುತ್ತಿದೆ. ತಮ್ಮ ತಾಯಿಯಂತೆ, ತಂದೆ­ಯಂತೆ, ಅಜ್ಜಿಯಂತೆ ಅಥವಾ ಮುತ್ತಜ್ಜನಂತೆ ತಮ್ಮದೇ ಪಕ್ಷವನ್ನು ಪರಿಣಾಮಕಾರಿಯಾಗಿ ಚುನಾ­ವಣೆಯಲ್ಲಿ ಮುನ್ನಡೆಸಿ ಗೆಲ್ಲಿಸುವ ವ್ಯಕ್ತಿ ರಾಹುಲ್‌ ಗಾಂಧಿ ಅವರಲ್ಲ. ಇದರಲ್ಲಿ ರಾಹುಲ್‌ ಅವರ ವೈಯಕ್ತಿಕ ನ್ಯೂನತೆಗಳ ಪಾಲು ಇದೆ. ಜೊತೆಗೆ ದೇಶ ಈಗ ಬದಲಾಗಿದೆ ಎನ್ನುವುದೂ ನಿಜ.

ರಾಜ್ಯ ಅಥವಾ ಸ್ಥಳೀಯ ಚುನಾವಣೆಗಳಲ್ಲಿ ವಂಶ ಪಾರಂಪರ್ಯ  ರಾಜಕೀಯಕ್ಕೆ ಈಗಲೂ ಒಂದಿಷ್ಟು ಪ್ರಾಮುಖ್ಯವಿದೆ. ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಪಾತ್ರ ಬಯಸುವಾಗ ಹಳೆಯ ಸಾಧನೆಗಳ ತುತ್ತೂರಿ ಊದಿಕೊಂಡರಷ್ಟೇ ಸಾಲದು. ತಮ್ಮ ನಾಯಕರು ಶ್ರಮವಹಿಸಿ ಕೆಲಸ ಮಾಡಬೇಕು, ಕಷ್ಟಕರವಾದ ಜವಾಬ್ದಾರಿಗಳಿಗೆ ಎದೆಗೊಡಬೇಕು, ವೈಯಕ್ತಿಕವಾಗಿ ಅಪಾಯ­ಗಳನ್ನು ಮೈಮೇಲೆ ಎಳೆದುಕೊಳ್ಳುವ ಸ್ವಭಾವ ಅವರಿಗೆ ಇರಬೇಕು, ಹಸನಾದ ಭವಿಷ್ಯ ರೂಪಿಸುವ ಸಂಕಲ್ಪ ಅವರಿಗೆ ಇರಬೇಕು ಎಂದೆಲ್ಲಾ ಭಾರತೀ­ಯರು ಈಗ ಬಯಸುತ್ತಾರೆ. ಮಾಜಿ ಪ್ರಧಾನಿಯ ಕುಟುಂಬದ ಹುಡುಗ ಎನ್ನುವ ಒಂದೇ ಅರ್ಹತೆ ಈಗ ದೊಡ್ಡ ಹುದ್ದೆಯ ಆಕಾಂಕ್ಷೆಗೆ ಸಾಲದು.

ಹಾಗಿದ್ದರೆ ಇಲ್ಲಿಂದ ಮುಂದೆ ಕಾಂಗ್ರೆಸ್‌ ಎಲ್ಲಿಗೆ ಹೋಗಬೇಕು? ರಾಹುಲ್‌ ಸಹೋದರಿ ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ತರುವುದು ಒಂದು ಆಯ್ಕೆ. ಸುಲಲಿತವಾಗಿ ಮಾತನಾಡುವ ಅವರು ಖಂಡತುಂಡವಾಗಿ ಟೀಕಿಸಲೂ ಹಿಂಜರಿ­ಯು­­ವುದಿಲ್ಲ.. ಪ್ರಿಯಾಂಕಾ ಜೊತೆಗೆ ಅವರ ಪತಿಯ ವಿಚಾರ ಪ್ರಸ್ತಾಪವಾಗೇ ಆಗುತ್ತದೆ. ತಮ್ಮ ಕುಟುಂಬದ ಹೊಳಪು ಕುಂದುವಂತೆ ಮಾಡಿರುವ ಸಾಮಾಜಿಕ ಅಂಶಗಳು ಅವರಿಗೂ ಅನ್ವಯವಾ­ಗುತ್ತವೆ. ಅವರಿಗೆ ಹೇಳಿಕೊಳ್ಳುವಂಥ ವೃತ್ತಿ ಅಥವಾ ರಾಜಕೀಯ ಸಾಧನೆಗಳಿಲ್ಲ. ‘ನಾನು ಕೂಡ ನೆಹರು–ಗಾಂಧಿ ಕುಡಿ’ ಎಂದಷ್ಟೇ ಅವರು ಹೇಳಿಕೊಳ್ಳಬಹುದು.

ಪಕ್ಷದ ಇತರ ನಾಯಕರನ್ನ ಉತ್ತೇಜಿಸುವುದು ಕಾಂಗ್ರೆಸ್‌ ಪಕ್ಷಕ್ಕೆ ಇರುವ ಇನ್ನೊಂದು ದಾರಿ. ಇದು ಒಂದು ಕುಟುಂಬದ ನಿಷ್ಠೆಯನ್ನು ಏಕಾಏಕಿ ತೊರೆದು, ಒಂದು ಸಮಷ್ಟಿ ನಾಯಕತ್ವ ಮೂಡಲು ಕಾರಣವಾಗಬಹುದು. ಇದರಿಂದ ರಾಹುಲ್‌ ಅವರಿಗಿಂತ ಮಿಗಿಲಾದ ನೀತಿ ನಿರೂಪಕರು, ಮತ­ದಾ­ರರ ಮನವೊಲಿಸುವವರನ್ನು ಪಕ್ಷದಲ್ಲಿ ಬಿಂಬಿಸಬಹುದು.

ದೆಹಲಿ ಮೂಲದ ಕೆಲವು ಟೀಕಾಕಾರರು ಚುನಾ­ವಣೆಯ ಸಂದರ್ಭದಲ್ಲಿ, ‘ನೆಹರು–ಗಾಂಧಿ­ಗಳಿಗೆ ಕಾಂಗ್ರೆಸ್‌ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಆ ಪಕ್ಷಕ್ಕೆ ಅವರು ಬೇಕಾಗಿದ್ದಾರೆ’ ಎಂದು ಹೇಳಿದ್ದರು. ದೆಹಲಿಯಿಂದ ಹೊರಗೆ ಇರುವ ನಮ್ಮಂಥವರಿಗೆ ಇದು ಮೇಲ್ಪದರದ ಹೇಳಿಕೆಯಂತೆ ಕಾಣುತ್ತದೆ. ಆ ಕುಟುಂಬಕ್ಕೆ ಹಿಂದಿದ್ದ ಪ್ರಭಾವಳಿ ಈಗ ಇಲ್ಲ­ವಾಗಿದ್ದು, ಸಾರ್ವಜನಿಕ ವಿಮರ್ಶೆಗೆ ಒಳಪಟ್ಟಿದೆ, ವಿಶೇಷವಾಗಿ ಆ ಕುಟುಂಬದ ಓರ್ವ ವ್ಯಕ್ತಿಯನ್ನು ಕಾಡತೊಡಗಿದೆ.

ಕಾಂಗ್ರೆಸ್‌ ಪುನರುತ್ಥಾನದ ಏಕೈಕ ಸರಿದಾರಿ ಕುಟುಂಬದ ಪಾತ್ರ ಕುಗ್ಗುವುದರಲ್ಲಿ ಅಥವಾ ನಂದು­ವುದರಲ್ಲಿ ಇದೆ ಎಂದು ನನಗೆ ಕೆಲವು ಕಾಲ­ದಿಂದಲೂ ಅನ್ನಿಸುತ್ತಿದೆ. ಈ ಮಹಾ ಚುನಾ­ವಣೆ ಫಲಿತಾಂಶ ನನ್ನ ಈ ದೃಷ್ಟಿಕೋನವನ್ನು ದೃಢಪ­ಡಿಸಿದೆ. ಕೆಲವೊಮ್ಮೆ ಶ್ರೇಷ್ಠ, ಕೆಲವೊಮ್ಮೆ ಹೀನ­ವಾಗಿದ್ದ, ಮೋತಿಲಾಲ್‌ ನೆಹರು ಹಾಗೂ ಅವರ ವಂಶಸ್ಥರು ಕಟ್ಟಿಡ ‘ಕೀರ್ತಿ ಕಟ್ಟಡ’ ಈಗ ಅವಶೇಷಗಳ ರಾಶಿಯಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.