ಯಾದಗಿರಿ: ‘ವಯಸ್ಸಿನ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಹೇಳುವ ಮೂಲಕ ಯಾದಗಿರಿ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಅವರಿಗೀಗ 82ರ ವಯಸ್ಸು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಹಾಗೂ ಹಿರಿತನಕ್ಕೆ ಸಿದ್ದರಾಮಯ್ಯ ಬೆಲೆ ನೀಡಲಿಲ್ಲ ಎಂಬ ಬಗ್ಗೆ ಅವರು ಆಗಾಗ ಮಾಧ್ಯಮಗಳ ಎದುರು ಅಸಮಾಧಾನ ಹೊರಹಾಕುತ್ತಲೇ ಬಂದಿದ್ದರು. ಉತ್ತರ ಕರ್ನಾಟಕ ಅಥವಾ ಮೈಸೂರು ಭಾಗದ ಸಚಿವರಿಗೆ ಯಾದಗಿರಿ ಜಿಲ್ಲೆಗೆ ಉಸ್ತುವಾರಿ ನೀಡುವಂತೆ ಮನವಿ ಕೂಡ ಮಾಡಿದ್ದರು. ಆದರೆ, ಇವರ ಮಾತಿಗೆ ಸಿದ್ದರಾಮಯ್ಯ ಮನ್ನಣೆ ನೀಡಿರಲಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಎಂ. ಖರ್ಗೆ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿದ ಮೇಲೆ ಮಾಲಕರಡ್ಡಿ ಕೆಡಿಪಿ ಸಭೆಗಳಿಂದ ದೂರು ಉಳಿದಿದ್ದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು. ಕಾಂಗ್ರೆಸ್‌ನಲ್ಲಿ ಸಂಪೂರ್ಣ ಸ್ವಾರ್ಥ ರಾಜಕಾರಣ ನಡೆಯುತ್ತಿದೆ. ಇದರಿಂದ ಪಕ್ಷ ಜನ ವಿರೋಧಿಯಾಗುತ್ತಿದೆ ಎಂದು ಕಿಡಿಕಾರಿದ್ದರು.
ರಾಜಕೀಯ ಪ್ರವೇಶ
ಮಾಲಕರಡ್ಡಿ 1978ರಲ್ಲಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. 1982–84ರವರೆಗೆ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದರು. ಐದು ಬಾರಿ ವಿಧಾನಸಭೆ ಸದಸ್ಯರಾಗಿ ಚುನಾಯಿತರಾಗಿದ್ದರು.(1989, 1994, 1999, 2008, 2013)
1994ರಲ್ಲಿ ಎಂ.ವೀರಪ್ಪ ಮೊಯಿಲಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದರು. 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.
ಮಾಲಕರಡ್ಡಿ ನಡೆ ನಿಗೂಢ!
‘ಕಾಂಗ್ರೆಸ್‌ನಲ್ಲಿ ಸ್ವಾರ್ಥ ರಾಜಕಾರಣದಿಂದ ಬೇಸರವಾಗಿತ್ತು. ಪುನಃ ಶಾಸಕನಾಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಯುವ ಉತ್ಸಾಹಿಗಳಿಗೆ ಅವಕಾಶ ಕಲ್ಪಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಮಾಲಕರಡ್ಡಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನನ್ನ ಮುಂದಿನ ನಡೆ ಬಗ್ಗೆ ಈಗಲೇ ಹೇಳುವುದಿಲ್ಲ. ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಿಂದ ನಾನು ದೂರ ಉಳಿಯುವುದಿಲ್ಲ. ಮುಂದೆ ಯಾವುದೇ ಪಕ್ಷದ ಅಭ್ಯರ್ಥಿಗೂ ನಾನು ಬೆಂಬಲ ಸೂಚಿಸಬಹುದು’ ಎನ್ನುವ ಮೂಲಕ ತಮ್ಮ ನಡೆಯನ್ನು ಮತ್ತಷ್ಟು ನಿಗೂಢಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.