ADVERTISEMENT

ದಲಿತ ಮತ ಚದುರುವ ಆತಂಕ

ಕೆ.ಜೆ.ಮರಿಯಪ್ಪ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ದಲಿತ ಮತ ಚದುರುವ ಆತಂಕ
ದಲಿತ ಮತ ಚದುರುವ ಆತಂಕ   

ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ತಮ್ಮ ಮಕ್ಕಳನ್ನು ಅಧಿಕಾರಕ್ಕೆ ತರುವುದು, ತಾವೂ ಅಧಿಕಾರ ಉಳಿಸಿಕೊಳ್ಳುವ ಸವಾಲಿಗೆ ಒಡ್ಡಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕ್ಷೇತ್ರ ಬದಲಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದ ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ವೇದಿಕೆ ಸಿದ್ಧಪಡಿಸಿದ್ದಾರೆ. ಈಚೆಗೆ ಮೈಸೂರಿನಲ್ಲಿ ಆಪ್ತರು, ಮುಖಂಡರ ಗುಪ್ತಸಭೆ ನಡೆಸಿ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದನ್ನು ಖಚಿತಪಡಿಸಿ
ದ್ದಾರೆ. ವರುಣಾದಿಂದ ಯತೀಂದ್ರ ಸ್ಪರ್ಧಿಸುತ್ತಿದ್ದು, ಆಶೀರ್ವದಿಸುವಂತೆ ಎರಡೂ ಕ್ಷೇತ್ರದ ಮುಖಂಡರನ್ನು ಕೇಳಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ತಿ.ನರಸೀಪುರ ಮೀಸಲು ಕ್ಷೇತ್ರದಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಜಯಗಳಿಸಿದ್ದ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿ ತಮ್ಮ ಮಗ ಸುನಿಲ್ ಬೋಸ್‌ಗೆ ಕ್ಷೇತ್ರ ಬಿಟ್ಟುಕೊಡಲು ಅಣಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮತ್ತೊಂದು ಮೀಸಲು ಕ್ಷೇತ್ರ ನಂಜನಗೂಡಿನಿಂದ ಸ್ಪರ್ಧಿಸುವ ಪ್ರಯತ್ನವನ್ನು ಅವರು ನಡೆಸಿದ್ದರು. ಹಾಲಿ ಶಾಸಕರಿಗೆ ಟಿಕೆಟ್ ಎಂದು ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲೇ ಹೇಳಿದ್ದಾರೆ. ಹಾಗಾಗಿ ನಂಜನಗೂಡು ಕ್ಷೇತ್ರದ ಪ್ರಯತ್ನ ಬಿಟ್ಟು ಬೆಂಗಳೂರಿನ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಮಕ್ಕಳಿಗೆ ಕ್ಷೇತ್ರ ಬಿಟ್ಟುಕೊಟ್ಟು ಮಹದೇವಪ್ಪ ಜಿಲ್ಲೆಯಿಂದ ಹೊರಹೋದರೆ ಗೆಲುವಿಗೆ ಬೇಕಾದ ಜಾತಿ ಸಮೀಕರಣದ ಸೂತ್ರ ಹೆಣೆಯುವವರು ಯಾರು ಎಂಬ ಚರ್ಚೆಯೊಂದು ಆರಂಭವಾಗಿದೆ. ತಿ.ನರಸೀಪುರ, ವರುಣಾ, ನಂಜನಗೂಡು, ಚಾಮುಂಡೇಶ್ವರಿ ಭಾಗದಲ್ಲಿ ದಲಿತರು, ಲಿಂಗಾಯತರು, ಕುರುಬರ ಮತಗಳು ಪ್ರಮುಖಪಾತ್ರ ವಹಿಸುತ್ತವೆ. ಈ ಭಾಗದಲ್ಲಿ ಲಿಂಗಾಯತರ ಮತಬುಟ್ಟಿಯನ್ನು ತನ್ನತ್ತ ತಿರುಗಿಸಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸಿತ್ತು. ಕೆಲ ಸಮಯ ಲಿಂಗಾಯತ ನಾಯಕರ ಸ್ಥಾನ ತುಂಬಲು ಪರದಾಡಿತ್ತು. ನಂತರ ಎಚ್‌.ಎಸ್‌.ಮಹದೇವ ಪ್ರಸಾದ್ ಕಾಂಗ್ರೆಸ್ ಗೆ ಬಂದ ನಂತರ ಆ ಕೊರತೆ ಸ್ವಲ್ಪ ಮಟ್ಟಿಗೆ ನೀಗಿತ್ತು. ಅವರ ನಿಧನದ ನಂತರ ಪ್ರಸಾದ್ ಪತ್ನಿ ಮೋಹನ ಕುಮಾರಿ ಅವರನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿಕೊಂಡು ಸಚಿವರ
ನ್ನಾಗಿ ಮಾಡಲಾಗಿದೆ. ಆ ಮೂಲಕ ಅಲ್ಪಮಟ್ಟಿಗೆ ಲಿಂಗಾಯತರ ಮತಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮುಂದುವರಿದಿದೆ.

ಹಿಂದಿನ ಚುನಾವಣೆಗಳಲ್ಲಿ ಮಹದೇವಪ್ಪ ಮತ್ತು ಶ್ರೀನಿವಾಸ ಪ್ರಸಾದ್ ದಲಿತರ ಮತಗಳನ್ನು ತಂದುಕೊಡುತ್ತಿದ್ದರು.  ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ದಲಿತರ ಮತಗಳನ್ನು ಒಗ್ಗೂಡಿಸಲು ಮಹದೇವಪ್ಪ ಸಾಕಷ್ಟು ಬೆವರು ಹರಿಸಿದ್ದರು. ಕ್ಷೇತ್ರದಲ್ಲೇ ಉಳಿದು ದಲಿತರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಚದುರದಂತೆ ನೋಡಿಕೊಂಡಿದ್ದರು. ಮುಂದಿನ ಚುನಾವಣೆಯಲ್ಲೂ ಅವರನ್ನೇ ಮುಂದಿಟ್ಟುಕೊಂಡು ದಲಿತರ ಮತಗಳನ್ನು ಸೆಳೆಯಬೇಕಾಗಿದೆ. ಆದರೆ ಜಿಲ್ಲೆ ಬಿಟ್ಟು ಬೆಂಗಳೂರಿನಲ್ಲಿ ಸ್ಪರ್ಧಿಸಿದರೆ ಸ್ಥಳೀಯವಾಗಿ ದಲಿತ ಮುಖಂಡರ ಕೊರತೆ ಕಾಡಲಿದೆ ಎಂಬ ವಿಚಾರ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಮಹದೇವಪ್ರಸಾದ್ ನಿಧನದ ನಂತರ ಅವರಷ್ಟು ಸಮರ್ಥವಾಗಿ ಲಿಂಗಾಯತ ನಾಯಕರ ಸ್ಥಾನವನ್ನು ಮೈಸೂರು, ಚಾಮರಾಜನಗರ ಭಾಗದಲ್ಲಿ ತುಂಬಲು ಯಾರಿಂದಲೂ ಸಾಧ್ಯವಾಗಿಲ್ಲ. ಮುಂದಿನ ಚುನಾವಣೆ ಸಮಯದಲ್ಲಿ ಮಹದೇವಪ್ಪ ಸಹ ಜಿಲ್ಲೆಯಿಂದ ದೂರ ಸರಿದರೆ ದಲಿತ ನಾಯಕರ ಕೊರತೆ ಕಾಡಲಿದೆ. ಈ ಎರಡೂ ಸಮುದಾಯದ ಮತಗಳನ್ನು ಒಗ್ಗೂಡಿಸುವ ನಾಯಕರು ಯಾರು ಎಂಬುದು ಕಾಂಗ್ರೆಸ್‌ನ ಎರಡನೇ ಹಂತದ ನಾಯಕರನ್ನು ಚಿಂತೆಗೆ ಒಡ್ಡಿದೆ. ಈ ವಿಚಾರದ ಸುತ್ತಮುತ್ತ ರಾಜಕೀಯ ಚರ್ಚೆ ಗಿರಕಿ ಹೊಡೆಯುತ್ತಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ನಡೆಯುವುದರಿಂದ ಅವರೂ ಸಹ ವರುಣಾ, ಚಾಮುಂಡೇಶ್ವರಿ, ತಿ.ನರಸೀಪುರ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಲಾರರು. ಆಗ ಯತೀಂದ್ರ, ಸುನಿಲ್ ಬೋಸ್ ಅವರನ್ನು ಗೆಲ್ಲಿಸುವ ಹೊಣೆಗಾರಿಗೆ ಮಹದೇವಪ್ಪ ಹೆಗಲಿಗೇರಲಿದೆ. ಅಂತಹ ಸಮಯದಲ್ಲಿ ಬೆಂಗಳೂರಿಗೆ ವಲಸೆ ಹೋದರೆ ಮಕ್ಕಳ ಭವಿಷ್ಯ ಏನಾಗುವುದೊ ಎಂಬ ಆತಂಕದಲ್ಲಿ ಅವರೂ ಇದ್ದಾರೆ. ಹೀಗಾಗಿ ವಲಸೆ ನಿರ್ಧಾರವನ್ನು ಅಳೆದು– ತೂಗುವಲ್ಲಿ ನಿರತರಾಗಿದ್ದಾರೆ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲೇ ಶ್ರೀನಿವಾಸ ಪ್ರಸಾದ್ ಅವರನ್ನು ಮುಂದಿಟ್ಟುಕೊಂಡು ದಲಿತರ ಮತಬುಟ್ಟಿಗೆ ಬಿಜೆಪಿ ಕೈಹಾಕಿದೆ. ಈ ಸಲ ಅದು ಮತ್ತಷ್ಟು ಹೆಚ್ಚಲಿದೆ. ಆ ಸಮುದಾಯದ ಮತಗಳು ಚದುರದಂತೆ ನೋಡಿಕೊಳ್ಳಬೇಕು ಎಂದು ರಾಜ್ಯಮಟ್ಟದ ನಾಯಕರನ್ನು ಎಚ್ಚರಿಸುತ್ತಿದ್ದಾರೆ. ಒಂದು ವೇಳೆ ಮಹದೇವಪ್ಪ ಬೆಂಗಳೂರಿನಲ್ಲಿ ಸ್ಪರ್ಧಿಸಿದರೆ ಮತ್ತೊಬ್ಬ ದಲಿತ ಸಮುಯದಾಯದ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ ಅವರನ್ನು ಈ ಭಾಗದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು. ರಾಜ್ಯ ರಾಜಕಾರಣಕ್ಕೆ ಕರೆತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

* ವರುಣಾ, ತಿ.ನರಸೀಪುರದಲ್ಲಿ ಮಕ್ಕಳ ಕಾರುಬಾರು

* ದಲಿತರ ಮತ ಚದುರುವ ಆತಂಕ

* ಆರಂಭವಾಗಿದೆ ಜಾತಿ ಸಮೀಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.