ADVERTISEMENT

ಅಧಿಕಾರದಿಂದ ಬಿಜೆಪಿ ದೂರ ಇಡಿ : ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ದಾವಣಗೆರೆಯಲ್ಲಿ ಶನಿವಾರ ಸಿಪಿಐ ರಾಜ್ಯ ಸಮ್ಮೇಳನವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಶನಿವಾರ ಸಿಪಿಐ ರಾಜ್ಯ ಸಮ್ಮೇಳನವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಉದ್ಘಾಟಿಸಿದರು.   

ದಾವಣಗೆರೆ: ‘ಕರ್ನಾಟಕದ ಭವಿಷ್ಯ ನಿರ್ಧರಿಸುವ ಚುನಾವಣೆ ಎದುರಾಗುತ್ತಿದೆ. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಸಾಂವಿಧಾನಿಕ ಮಾರ್ಗಗಳನ್ನು ಹಿಡಿದಿದೆ. ರಾಜ್ಯದ ಜನ ಬಿಜೆಪಿಗೆ ಅಧಿಕಾರ ನೀಡಬಾರದು’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಮನವಿ ಮಾಡಿದರು.

ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಿಪಿಐ ಪಕ್ಷದ 23ನೇ ರಾಜ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿ, ಕೆಲವು ಮಾಧ್ಯಮ ಹಾಗೂ ಉದ್ಯಮಿಗಳನ್ನು ಬಳಸಿಕೊಂಡು ಮೋದಿ, ಷಾ ಇರುವುದೇ ಗೆಲ್ಲುವುದಕ್ಕೆ; ಇವರಿಂದಲೇ ಭವ್ಯ ಭಾರತ ಎಂಬ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಆದರೆ, ನಿಜವಾದ ಅರ್ಥದಲ್ಲಿ ಬಿಜೆಪಿ ಗುಜರಾತಿನಲ್ಲಿ ಗೆದ್ದಿಲ್ಲ. ಪಂಜಾಬ್‌, ಬಿಹಾರಗಳಲ್ಲೂ ಗೆದ್ದಿಲ್ಲ. ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕರ್ನಾಟಕದಲ್ಲಿ ಮತಾಂಧರ ಆಟ ನಡೆಯದಂತೆ ಎಡಶಕ್ತಿಗಳು ಒಗ್ಗೂಡಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯತೀತ ಮನಸ್ಸುಗಳು ಸಮಾನ ವೇದಿಕೆ ರಚಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂಬುದು ಸಿಪಿಐಗೆ ತಿಳಿದಿದೆ. ಆದರೆ, ಕಾಂಗ್ರೆಸ್‌ ಪೈಪೋಟಿಗಾಗಿ ತಾನು ಹೆಚ್ಚು ಹಿಂದೂ ಎಂದು ತೋರಿಸಿಕೊಳ್ಳುವ ರಾಜಕೀಯ ನಾಟಕ ಬಿಟ್ಟು, ನೆಹರೂ ಕಾಲದ ಅಭಿವೃದ್ಧಿ ಸೂಚಿಯನ್ನು ಮುನ್ನೆಲೆಗೆ ತರಬೇಕು’ ಎಂದು ಸಲಹೆ ನೀಡಿದರು.

‘ಭಾರತ ಕೇವಲ ಮೋದಿ, ಷಾ ಇಬ್ಬರದೇ ಅಲ್ಲ. ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡಿದ್ದು ಭಾರತ. ಇಲ್ಲಿ ಸರ್ವರನ್ನೂ ಸಮಾನವಾಗಿ ಕಾಣುವ ಅಂಬೇಡ್ಕರ್‌ ಸಂವಿಧಾನವೇ ಶ್ರೇಷ್ಠ ಹೊರತು ಮನುಸ್ಮೃತಿ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಸೈಯದ್‌ ಅಜೀಜ್‌ ಪಾಷಾ ಮಾತನಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಸಭೆ ಕರೆಯಿರಿ

ಮಹದಾಯಿ ನದಿ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಲೇ ತಮ್ಮ ರಾಜಕೀಯ ಹಿತಾಸಕ್ತಿ ಬದಿಗಿಟ್ಟು ರಾಜಿಸೂತ್ರದ ಮೂಲಕ ಬಗೆಹರಿಸಲು ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್‌ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.