ADVERTISEMENT

ರಾಯಚೂರು ಲೋಕಸಭೆ ಕ್ಷೇತ್ರ: ಚುನಾವಣೆ ಕಣದಲ್ಲಿ ವಕೀಲರ ‘ವಾದ’

ನಾಲ್ಕು ಮಂದಿ ಎಲ್‌ಎಲ್‌ಬಿ ಪದವೀಧರರು

ನಾಗರಾಜ ಚಿನಗುಂಡಿ
Published 30 ಏಪ್ರಿಲ್ 2019, 17:11 IST
Last Updated 30 ಏಪ್ರಿಲ್ 2019, 17:11 IST
ಬಿ.ವಿ. ನಾಯಕ
ಬಿ.ವಿ. ನಾಯಕ   

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆ ಕಣದಲ್ಲಿರುವ ಐದು ಮಂದಿ ಅಭ್ಯರ್ಥಿಗಳ ಪೈಕಿ ನಾಲ್ಕು ಮಂದಿ ಕಾನೂನು ಪದವೀಧರರಿದ್ದು, ಅಭಿವೃದ್ಧಿ ಪರ ತಮ್ಮದೇ ಆದ ನಿಲುವುಗಳನ್ನು ಜನರ ಮುಂದೆ ಮಂಡಿಸುತ್ತಿದ್ದಾರೆ.

ಎಸ್‌ಯುಸಿಐ ಪಕ್ಷದಿಂದ ಸ್ಪರ್ಧಿಸಿರುವ ಕೆ. ಸೋಮಶೇಖರ್‌ ಯಾದಗಿರಿ ಅವರು ಬಿ.ಎ. ವರೆಗೂ ಶಿಕ್ಷಣ ಪಡೆದಿದ್ದಾರೆ. ಇನ್ನುಳಿದ ನಾಲ್ಕು ಮಂದಿ ಕಾನೂನು ಪದವೀಧರರ ಪೈಕಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹಿರಿಯರು. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಕಿರಿಯರು.

ಧಾರವಾಡದ ಕಾನೂನು ವಿಶ್ವವಿದ್ಯಾಲಯದಲ್ಲಿ 1987 ರಲ್ಲಿಯೇ ರಾಜಾ ಅಮರೇಶ್ವರ ನಾಯಕ ಕಾನೂನು ಪದವಿ ಪೂರ್ಣಗೊಳಿಸಿದ್ದಾರೆ. 62 ರ ಪ್ರಾಯದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆಯುತ್ತಿದ್ದಾರೆ. ಇದಕ್ಕೂ ಮೊದಲು ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ, ಸಚಿವರಾಗಿದ್ದರು. ಈಗ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನೇರ ಸೆಣಸಾಟ ನಡೆಸುತ್ತಿದ್ದಾರೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರು ಧಾರವಾಡದ ಕೆಪಿಇಎಸ್‌ ಕಾನೂನು ಮಹಾವಿದ್ಯಾಲಯದಲ್ಲಿ 1993 ರಲ್ಲಿ ಕಾನೂನು ಪದವಿ ಓದು ಪೂರ್ಣಗೊಳಿಸಿದ್ದಾರೆ. ಒಂದು ಅವಧಿ ಸಂಸದರಾಗಿದ್ದರು. ಎರಡನೇ ಬಾರಿಯೂ ಗೆಲುವಿನ ನಿರೀಕ್ಷೆಯೊಂದಿಗೆ ಪೈಪೋಟಿ ನೀಡುತ್ತಿದ್ದಾರೆ. ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ಅವರಿಗೆ 54 ರ ಪ್ರಾಯವಿದೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಭ್ಯರ್ಥಿ ವೆಂಕನಗೌಡ ಅವರು ಕಲಬುರ್ಗಿಯ ಎಸ್‌ಎಸ್‌ಎಲ್‌ ಕಾನೂನು ಮಹಾವಿದ್ಯಾಲಯದಲ್ಲಿ 2012 ರಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಮತದಾರರ ಒಲವು ಸೆಳೆಯಲು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಬಿಎಸ್‌ಪಿ ವೈಚಾರಿಕತೆಯನ್ನು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.

ಎಲ್‌ಎಲ್‌ಬಿ ಓದಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಕಿರಿಯ ನಿರಂಜನ ನಾಯಕ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. 30 ರ ವಯಸ್ಸಿನ ಅವರು ಸಾಮಾನ್ಯ ವ್ಯಕ್ತಿಯಾಗಿ ಮತಗಳನ್ನು ಕೇಳುತ್ತಿದ್ದಾರೆ. ಮೈಸೂರಿನ ಜೆಎಸ್‌ಎಸ್‌ ಕಾನೂನು ಮಹಾವಿದ್ಯಾಲಯದಲ್ಲಿ 2015 ರಲ್ಲಿ ಕಾನೂನು ಪದವಿ ಪಾಸಾಗಿದ್ದಾರೆ. ರಾಜಕೀಯ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ತುಡಿತ ಅವರಲ್ಲಿದೆ.

* ರಾಯಚೂರು ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಅಸಮತೋಲನ ಸಮಸ್ಯೆ ಎದುರಿಸುತ್ತಿದೆ. ಹಂತಹಂತವಾಗಿ ಅಭಿವೃದ್ಧಿ ಮಾಡುವ ಕೆಲಸ ಆರಂಭಿಸಲಾಗಿದ್ದು, ಅವುಗಳನ್ನೆಲ್ಲ ಪೂರ್ಣ ಮಾಡುವುದು ನನ್ನ ಆದ್ಯತೆ.

–ಬಿ.ವಿ. ನಾಯಕ,ಕಾಂಗ್ರೆಸ್‌ ಅಭ್ಯರ್ಥಿ

*ವಿಮಾನ ನಿಲ್ದಾಣ ನಿರ್ಮಾಣ, ರೈಲ್ವೆ ಯೋಜನೆಗಳು ಸೇರಿದಂತೆ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.

–ರಾಜಾ ಅಮರೇಶ್ವರ ನಾಯಕ,ಬಿಜೆಪಿ ಅಭ್ಯರ್ಥಿ

*ಪ್ರಶ್ನೆ ಮಾಡುವ ಮನೋಭಾವ ಜನರಲ್ಲಿ ಬರಬೇಕಿದೆ. ರಾಜಕೀಯ ವ್ಯಕ್ತಿಗಳು ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮಾನಸಿಕವಾಗಿ ಬದಲಾವಣೆಯಾದರೆ, ಅಭಿವೃದ್ಧಿ ತಾನಾಗಿಯೇ ಆಗುತ್ತದೆ.

ನಿರಂಜನ ನಾಯಕ,ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ

*ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ವಿಷಯವನ್ನೇ ಕೈಬಿಟ್ಟಿದ್ದಾರೆ. ಬಡತನ, ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗಳನ್ನು ಪ್ರಸ್ತಾಪ ಮಾಡುತ್ತಿಲ್ಲ. ಹಸಿದ ಜನರಿಗೆ ಭಾವನಾತ್ಮಕ ವಿಚಾರ ಹೇಳುತ್ತಿದ್ದಾರೆ.

ಕೆ. ಸೋಮಶೇಖರ್‌,ಎಸ್‌ಯುಸಿಐ ಅಭ್ಯರ್ಥಿ

* ಜಿಲ್ಲೆಯ ಪ್ರಾಥಮಿಕ ವಲಯ ಕೃಷಿಯಾಗಿದ್ದು, ಈ ಮೂಲಕವೇ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ನೀರಾವರಿ ಸೌಲಭ್ಯ ವ್ಯಾಪಕಗೊಳಿಸುವುದು ನನ್ನ ಆದ್ಯತೆ. ಇದನ್ನು ಜನರಿಗೆ ಹೇಳುತ್ತಿದ್ದೇನೆ.

–ವೆಂಕನಗೌಡ,ಬಿಎಸ್‌ಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.