ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಆತಿಶಿ ಅವರು ಭಾನುವಾರ ತಮ್ಮ ಪ್ರತಿಸ್ಪರ್ಧಿ, ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಚುನಾವಣಾ ಆಯೋಗಕ್ಕೆ ಇನ್ನೊಂದು ದೂರು ನೀಡಿದ್ದಾರೆ.
‘ಆಯೋಗದ ಪರವಾನಗಿ ಪಡೆಯದೆಯೇ ದಿಲ್‌ಶಾದ್ ಗಾರ್ಡನ್‌ನಲ್ಲಿ ಗಂಭೀರ್ ಅವರು ಭಾನುವಾರ ಚುನಾವಣಾ ಸಭೆ ನಡೆಸಿದ್ದಾರೆ. ಮೂರು ದಿನಗಳಲ್ಲಿ ಎರಡನೇ ಬಾರಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿರುವ ಆತಿಶಿ, ಬಾರಿಬಾರಿ ನಿಯಮವನ್ನು ಮೀರುತ್ತಿರುವ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಅವರಿಗೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಿಷೇಧ ಹೇರಬೇಕು’ ಎಂದು ಒತ್ತಾಯಿಸಿದ್ದಾರೆ.
ಗಂಭೀರ್ ಅವರು ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವು ದಿನಗಳ ಹಿಂದೆ ಆತಿಶಿ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಭಾನುವಾರ ಸ್ಪಷ್ಟನೆ ನೀಡಿರುವ ಗಂಭೀರ್, ‘ನಾನು ಒಂದು ಮತದಾರರ ಗುರುತಿನ ಚೀಟಿಯನ್ನು ಮಾತ್ರ ಹೊಂದಿದ್ದೇನೆ, ಎಎಪಿ ಮುಖಂಡರು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ’ ಎಂದಿದ್ದಾರೆ.
‘ನಾನು ಸಣ್ಣವನಿದ್ದಾಗ ರಾಜೇಂದ್ರ ನಗರದಲ್ಲಿರುವ ನನ್ನ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದೆ. ಆದರೆ ಅಲ್ಲಿಂದ ನಾನು ಯಾವತ್ತೂ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಕೊಟ್ಟಿರಲಿಲ್ಲ ಮಾತ್ರವಲ್ಲ ಆ ಕ್ಷೇತ್ರದಲ್ಲಿ ಎಂದೂ ಮತದಾನ ಮಾಡಿರಲಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.