ಬೆಂಗಳೂರು: ಹಾಸನ ನಗರದ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಯೋಗಾ ರಮೇಶ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಮೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಸಚಿವ ಜಮೀರ್ ಅಹಮ್ಮದ್, ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಐಟಿ ದಾಳಿ: ಬಿಜೆಪಿ ಹುನ್ನಾರ
‘ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದರು. ಇದು ಬಿಜೆಪಿಯವರ ಹುನ್ನಾರ. ಈ ಚುನಾವಣೆಯಲ್ಲಿ ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ವಿರೋಧ ಪಕ್ಷದವರಲ್ಲಿ ಭಯವನ್ನುಂಟು ಮಾಡಲು ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ’ ಎಂದರು.
‘ಐಟಿ ಅಧಿಕಾರಿಗಳು ಬಿಜೆಪಿಯವರ ಮನೆ ಮೇಲೆ ಏಕೆ ದಾಳಿ ಮಾಡುತ್ತಿಲ್ಲ. ಬಿಜೆಪಿಯವರೇನು ಹರಿಶ್ಚಂದ್ರರಾ? ಇವರೂ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಮನೆಗಳ ಮೇಲೆ ಏಕೆ ದಾಳಿ ಮಾಡಿಲ್ಲ’ ಎಂದು ಪ್ರಶ್ನಿಸಿದರು.
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಭವಿಷ್ಯದಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದವರೆ ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದು. ಹಾಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಈಗ ಯೋಗಾ ರಮೇಶ್ ಸೇರ್ಪಡೆಯಿಂದ ಹಾಸನ ಜಿಲ್ಲೆಗೆ ಆನೆ ಬಲ ಬಂದಂತಾಗಿದೆ ಎಂದರು ಹೇಳಿದರು.
‘ಎ.ಮಂಜು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಮುಂದೆ ತಮ್ಮ ತಪ್ಪಿನ ಅರಿವಾಗಲಿದೆ. ಬಿಜೆಪಿಯಲ್ಲಿ ಮೂಲೆ ಗುಂಪಾದಾಗ ಅವರಿಗೆ ಗೊತ್ತಾಗಲಿದೆ. ಪಕ್ಷ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನವನ್ನು ಕೊಟ್ಟಿತ್ತು. ಆದರೆ, ಅದೆಲ್ಲವನ್ನೂ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಐಟಿ ದಾಳಿ ಕುರಿತು ಗಣ್ಯರ ಅಭಿಪ್ರಾಯಗಳು
‘ಈಗ ರಾಜಕೀಯ ಪ್ರೇರಿತವಾಗಿ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿದ್ದಾರೆ. ದೇಶದಲ್ಲಿ ವಿರೋಧ ಪಕ್ಷಗಳು ಇರಬಾರದು ಅನ್ನೋದು ಮೋದಿಯವರ ಅಜೆಂಡಾ. ಐಟಿ ಅಧಿಕಾರಿ ಬಾಲಕೃಷ್ಣ ಒಬ್ಬ ಬಿಜೆಪಿ ಏಜೆಂಟ್. ರಾಜ್ಯದ ಐಟಿ ಮುಖ್ಯಸ್ಥರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಐಟಿ ಬಿಜೆಪಿಯ ಅಂಗ ಸಂಸ್ಥೆಯಾಗಿದೆ. ನಾವು ಬಿಎಸ್‌ವೈ ವಿರುದ್ಧ ಆಮಿಷ ಒಡ್ಡುತ್ತಿರುವ ಬಗ್ಗೆ ದೂರು ನೀಡಿದ್ದೆವು. ಆಪರೇಷನ್ ಕಮಲ ಮಾಡಲು ₹10 ಕೋಟಿ ₹30 ಕೋಟಿ ಅಂತ ₹200–300 ಕೋಟಿ ಆಫರ್ ಕೊಟ್ಟಿದ್ದರು. ಈ ಬಗ್ಗೆ ಐಟಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದುಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
***
‘ಇದು ನಿಜಕ್ಕೂ ಅನಿರೀಕ್ಷಿತ ದಾಳಿ ಅಲ್ಲ. ಇದು ನಮಗೆ ಮೊದಲೇ ಗೊತ್ತಿತ್ತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ನಿನ್ನೆಯಷ್ಟೇ ಹೇಳಿದ್ದರು. ಈಗ ದಾಳಿ ನಡೆದಿರುವುದು ನಿಜವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ದಾಳಿ ನಡೆದಿತ್ತು. ಬೇರೆ ಬೇರೆ ರಾಜ್ಯಗಳ ಚುನಾವಣಾ ಸಂದರ್ಭದಲ್ಲೂ ದಾಳಿ ನಡೆದಿದೆ. ದಾಳಿಯನ್ನು ಖಂಡಿಸಿ ನಾವು ಪ್ರತಿಭಟನೆಯನ್ನೂ ಮಾಡಿದ್ದೆವು. ಪ್ರಧಾನಿ ಮೋದಿ ಕೇಂದ್ರ ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ತಿದಾರೆ. ಐಟಿ ಸಂಸ್ಥೆಯನ್ನು ಹೆಚ್ವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದುಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
***
‘ಐಟಿ ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರ ಇದೆ. ಆದರೆ, ನಿಷ್ಪಕ್ಷಪಾತವಾಗಿ ನಡೆಸಬೇಕು. ಅದಕ್ಕೆ ಆದ ಸಮಯ ಎಂಬುದು ಇದೆ. ಬಚುನಾವಣೆ ಘೋಷಣೆಯಾಗಿ ಪ್ರಚಾರ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೋಸ್ತಿ ಶಾಸಕರು, ಸಚಿವರ ಮನೆ ಮೇಲೆ ದಾಳಿ ನಡೆದಿದೆ. ಇದು ನಿಜಕ್ಕೂ ಖಂಡನೀಯ. ಅಧಿಕಾರಿಗಳು ತಮ್ಮ ಕೆಲಸ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಕಾಂಗ್ರೆಸ್- ಜೆಡಿಎಸ್ ನಾಯಕರೇ ಟಾರ್ಗೆಟ್ ಏಕೆ. ಬಿಜೆಪಿ ನಾಯಕರ ನಿವಾಸಗಳ ಮೇಲೂ ದಾಳಿ ನಡೆಸಲಿ’ ಎಂದುಗೃಹ ಸಚಿವ ಎಂ.ಬಿ ಪಾಟೀಲಪ್ರಶ್ನಿಸಿದರು.
‘ಯಾವುದೋ ಮೂಲಗಳಿಂದ ಮುಖ್ಯಮಂತ್ರಿಗೆ ಮಾಹಿತಿ ಸಿಕ್ಕಿರಬಹುದು. ಬಿಜೆಪಿಯ ಸ್ನೇಹಿತರೇ ಹೇಳಿರಬಹುದು. ಮುಖ್ಯಮಂತ್ರಿ ಅಂದ ಮೇಲೆ ಇಂಟೆಲಿಜೆನ್ಸ್, ಅಧಿಕಾರಿ ವರ್ಗ ಇರುತ್ತದೆ. ಹೀಗಾಗಿ ದಾಳಿ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿರಬಹುದು. ಆದರೆ, ಈ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ಐಟಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.
ಇನ್ನಷ್ಟು ಓದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.