ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರ ಮತಪ್ರಮಾಣ; ಬಿಜೆಪಿಗೆ ಶೇ 4.78 ಮುನ್ನಡೆ

ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆಗಳಿಗೆ 2018ರಲ್ಲಿ ನಡೆದ ಚುನಾವಣೆ

ಹರ್ಷವರ್ಧನ ಪಿ.ಆರ್.
Published 30 ಏಪ್ರಿಲ್ 2019, 16:36 IST
Last Updated 30 ಏಪ್ರಿಲ್ 2019, 16:36 IST
   

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ8 ವಿಧಾನಸಭಾ ಕ್ಷೇತ್ರಗಳಿದ್ದು, 2018ರ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಶೇ 4.78 ರಷ್ಟು ಅಧಿಕ ಮತ ಗಳಿಸಿತ್ತು. ಒಟ್ಟು 63,394 ಮತಗಳ ಮುನ್ನಡೆ ಸಾಧಿಸಿತ್ತು.

ಮೈತ್ರಿ ಮೂಲಕ ಜೆಡಿಎಸ್ ಐದರಲ್ಲಿ ಹಾಗೂ ಬಿಎಸ್ಪಿ ಮೂರರಲ್ಲಿ ಸ್ಪರ್ಧಿಸಿದ್ದು, ಒಟ್ಟು ಶೇ 1.15 ಮತಗಳನ್ನಷ್ಟೇ ಪಡೆಯಲು ಶಕ್ತವಾಗಿತ್ತು.

ಒಟ್ಟು ಸ್ಥಾನಗಳ ಪೈಕಿ ಬಿಜೆಪಿ ಹೆಚ್ಚಿದ್ದರೂ, ಮತಗಳಿಕೆಯಲ್ಲಿ ಭಾರಿ ಅಂತರವಿಲ್ಲ. ಅಲ್ಲದೇ, ಜೆಡಿಎಸ್‌ ಮತ್ತು ಬಿಎಸ್ಪಿ ಎಲ್ಲ ಕ್ಷೇತ್ರದಲ್ಲೂ ಠೇವಣಿ ಕಳೆದುಕೊಂಡಿದೆ. ಜೆಡಿಎಸ್‌ನ ಹಿರೇಕೆರೂರ, ರೋಣ ಮತ್ತು ಹಾವೇರಿ ಅಭ್ಯರ್ಥಿ ಮಾತ್ರ ಮೂರು ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದರು.

ADVERTISEMENT

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌–ಬಿಎಸ್ಪಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಒಟ್ಟು 86 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹೊರತು ಪಡಿಸಿ, ಉಳಿದ 70 ಅಭ್ಯರ್ಥಿಗಳಿಗೆ ಕೇವಲ ಶೇ 9.42 ಮತಗಳು ಬಂದಿದ್ದವು. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಪಾರಮ್ಯ ಹೊಂದಿರುವುದು ಸಾಬೀತಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ ಗಿಂತ 87,571 (ಶೇ 7.85) ಅಂತರದಲ್ಲಿ ಜಯಸಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಕಾಂಗ್ರೆಸ್‌ಅಂತರವು 24,177 ಕಡಿಮೆಯಾಗಿದೆ. ಆದರೆ, ಕ್ಷೇತ್ರದಲ್ಲಿ ನಡೆಯುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮತದಾರರು ಪ್ರತ್ಯೇಕ ನಿರ್ಧಾರವನ್ನೇ ನೀಡುತ್ತಾ ಬಂದಿದ್ದಾರೆ. ಸ್ಥಳೀಯ ಅಭ್ಯರ್ಥಿಗಳ ಪ್ರಭಾವವೂ ಇರುತ್ತವೆ.

ಶಿರಹಟ್ಟಿಯ ರಾಮಪ್ಪ ಲಮಾಣಿ (ಬಿಜೆಪಿ) 91,967 ಮತ ಪಡೆದಿದ್ದು, ಅತಿ ಹೆಚ್ಚು ಅಂತರಗಳಿಂದ (29,993) ಜಯ ಗಳಿಸಿದ್ದರು. ಬ್ಯಾಡಗಿ ಕ್ಷೇತ್ರದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ 21,271 ಅಂತರದಿಂದ ಜಯಿಸಿದ್ದರು. ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್‌ನ ಬಿ.ಸಿ.ಪಾಟೀಲ (555 ಮತಗಳು) ಅತಿ ಕಡಿಮೆ ಮತಗಳಿಂದ ಗೆದ್ದಿದ್ದರು. ಗದಗದ ಕಾಂಗ್ರೆಸ್ ಶಾಸಕ ಎಚ್‌.ಕೆ. ಪಾಟೀಲ (1,868 ಮತಗಳು) ಜಸ್ಟ್ ಪಾಸಾಗಿದ್ದರು. ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌–ಬಿಜೆಪಿಯನ್ನು ಹಿಂದಿಕ್ಕಿದ ಕೆಪಿಜೆಪಿಯ ಆರ್. ಶಂಕರ್ ಜಯಭೇರಿ ಬಾರಿಸಿದ್ದರು.

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಕಣದಲ್ಲಿ ಇಲ್ಲ. ಬಿಎಸ್ಪಿಯಿಂದ ಅಯೂಬ್‌ಖಾನ್‌ ಪಠಾಣ ಕಣಕ್ಕಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.