ರಾಮನಗರ: ಮೊದಲ ಹಂತದ ಚುನಾವಣೆಯಲ್ಲಿ 10-12 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ಜೊತೆಗೂಡಿ ಮತ ಚಲಾಯಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಮಂಡ್ಯದಲ್ಲಿ ನಿಖಿಲ್ ಗೆಲುವು ನಿಶ್ಚಿತ. ಅಲ್ಲಿನ ಚುನಾವಣೆಯನ್ನು ಮಾಧ್ಯಮಗಳು ವಿಪರೀತವಾಗಿ ಬಿಂಬಿಸಿದವು. ಸುಮಲತಾರಿಗೆ ಮೋದಿಗಿಂತ ಹೆಚ್ಚಿನ ಪ್ರಚಾರ ಕೊಟ್ಟವು ಎಂದರು.
ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತಗಟ್ಟೆಯ ಹೊರಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಮುಖ್ಯಮಂತ್ರಿ ಭೇಟಿ ಕಾರಣಕ್ಕೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ತಡೆ ಒಡ್ಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.