ಅಸನ್‌ಸೋಲ್: ರಾಷ್ಟ್ರೀಯತೆ ವಿಚಾರ ಹಾಗೂ ಚುನಾವಣೆಯಲ್ಲಿ ಪಾಕಿಸ್ತಾನದ ಹೆಸರು ಬಳಸಿಕೊಳ್ಳುತ್ತಿರುವುದಕ್ಕೆ ನಟಿ–ಟಿಎಂಸಿ ಅಭ್ಯರ್ಥಿ ಮೂನ್ ಮೂನ್ ಸೇನ್ ಬೇಸರ ವ್ಯಕ್ತಪಡಿಸಿದ್ದಾರೆ.ಅಗತ್ಯಬಿದ್ದರೆ ತಮ್ಮ ಸ್ನೇಹಿತ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆ ಮತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.
‘ಇಮ್ರಾನ್ ನನಗೆ ಸ್ನೇಹಿತರು. ಉಭಯ ದೇಶಗಳ ನಡುವಿನ ದ್ವೇಷಮಯ ಮಾತಾವರಣದ ಬಗ್ಗೆ ಅವರಿಗೆ ತಿಳಿಸುತ್ತೇನೆ.ಆದರೆ ಪಾಕ್ ಹೆಸರಿನಲ್ಲಿ ಒಡೆದಾಳುವ ರಾಜಕೀಯ ಮಾಡುತ್ತಿರುವುದು ಅಪಾಯಕಾರಿ’ ಎಂದಿದ್ದಾರೆ.
ಭಾರತದ ಹೆಸರನ್ನು ಮೋದಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ತಂದಿದ್ದಾರೆ. ಆದರೆ ಇದೇ ವೇಳೆ ದೇಶದೊಳಗಿನ ಎಷ್ಟೋ ಸಮಸ್ಯೆಗಳಿಗೆ ದನಿಯಾಗುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಸೇನ್ ಆರೋಪಿಸಿದ್ದಾರೆ. 80–90ರ ದಶಕದಲ್ಲಿ ಇಮ್ರಾನ್ ಖ್ಯಾತ ಕ್ರಿಕೆಟ್ ಆಟಗಾರರಾಗಿದ್ದರು. ಮೂನ್ ಮೂನ್ ಸೇನ್ ಅವರನ್ನು ಇಮ್ರಾನ್ ಸ್ನೇಹಿತೆ ಎಂದು ಬಿಂಬಿಸಲಾಗಿತ್ತು. ಇವರಿಬ್ಬರ ಕುರಿತ ಸುದ್ದಿಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದ್ದವು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಶಾಂತಿ ಮಾತುಕತೆ ಸುಲಭ ಎಂದಿದ್ದ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಲು ಸೇನ್ ನಿರಾಕರಿಸಿದ್ದಾರೆ. ‘ಇದು ರಾಜಕೀಯ ಹೇಳಿಕೆ. ಇಂತಹ ಹೇಳಿಕೆಗಳು ಬದಲಾಗುತ್ತಲೇ ಇರುತ್ತವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.