ಅಮ್ರೋಹ (ಉತ್ತರ ಪ್ರದೇಶ): ಮಹೇಂದ್ರ ಸಿಂಗ್ ಟಿಕಾಯತ್ ಉತ್ತರ ಪ್ರದೇಶದ ದೊಡ್ಡ ರೈತ ಹೋರಾಟಗಾರ. ಕೃಷಿಕರ ಸಮಸ್ಯೆಗಳನ್ನು ಎತ್ತಿಕೊಂಡು ದೇಶದ ರಾಜಧಾನಿ ದೆಹಲಿಗೆ ಮುತ್ತಿಗೆ ಹಾಕಿದರೆಂದರೆ, ಕೇಂದ್ರ ಸರ್ಕಾರ ನಡುಗುತ್ತಿತ್ತು. 25 ವರ್ಷಗಳ ಹಿಂದೆ ರೈತರ ದಂಡಿನೊಂದಿಗೆ ಬೋಟ್ಕ್ಲಬ್ಗೆ ಮುತ್ತಿಗೆ ಹಾಕಿ ಸ್ಥಳೀಯರಿಂದ ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಟಿಕಾಯತ್ ಅವರಿಲ್ಲ. ಅವರು ಸಂಘಟಿಸಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಶಕ್ತಿ ಕಳೆದುಕೊಂಡಿದೆ.
ರೈತ ಮುಖಂಡ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಬಳಿಕ ಕರ್ನಾಟಕದ ರೈತ ಸಮಸ್ಯೆಗಳ ಬಗ್ಗೆ ಹೇಗೆ ದನಿ ಎತ್ತುವವರಿಲ್ಲವೋ, ಉತ್ತರ ಪ್ರದೇಶದಲ್ಲಿಯೂ ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಬ್ಬು ಬೆಳೆಗಾರರ ಸಂಕಟ ಕೇಳುವವರಿಲ್ಲ. ರಾಜಕೀಯ ಕಾರಣಕ್ಕೆ ಕಬ್ಬು ಬೆಳೆಗಾರರ ಬೇಡಿಕೆಯನ್ನು ಸಮಾಜವಾದಿ ಪಕ್ಷದ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ದನಿ ಕಳೆದುಕೊಂಡಿರುವ ರೈತರು ಟಿಕಾಯತ್ ಅವರಂಥ ಮತ್ತೊಬ್ಬ ದೈತ್ಯ ಹೋರಾಟಗಾರನ ನಿರೀಕ್ಷೆಯಲ್ಲಿದ್ದಾರೆ.
ಮಹೇಂದ್ರ ಸಿಂಗ್ ಟಿಕಾಯತ್ ಭಾರತೀಯ ಕಿಸಾನ್ ಯೂನಿಯನನ್ನು ರಾಜಕೀಯ ಶಕ್ತಿಯಾಗಿ ಬೆಳೆಸಲು ಪ್ರಯತ್ನಿಸಿದ್ದರು. ಈ ಉದ್ದೇಶ ಸಾಧನೆಗೆ ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಜತೆ ಕೈಜೋಡಿಸಿದ್ದರು. ಆದರೆ, ಪ್ರಯೋಗ ಯಶಸ್ವಿಯಾಗಲಿಲ್ಲ. ಈಗ ಟಿಕಾಯತ್ ಅವರ ಮಗ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಅಪ್ಪನ ಪ್ರಯೋಗ ಮುಂದುವರಿಸಲು ಮುಂದಾಗಿದ್ದಾರೆ. ಆರ್ಎಲ್ಡಿ ಅಭ್ಯರ್ಥಿಯಾಗಿ ಪಶ್ಚಿಮ ಉತ್ತರ ಪ್ರದೇಶದ ‘ಅಮ್ರೋಹ’ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ರಾಕೇಶ್ ಟಿಕಾಯತ್ ಚುನಾವಣಾ ಅಖಾಡಕ್ಕೆ ಇಳಿದಿರುವುದು ಇದೇ ಮೊದಲಲ್ಲ. 2007ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ‘ಖತೌಲಿ’ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈಗಲೂ ಅವರಿಗೆ ಗೆಲುವು ಸುಲಭವಾಗಿ ದಕ್ಕುವಂತೆ ಕಾಣುವುದಿಲ್ಲ. ಪಶ್ಚಿಮ ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಕಳೆದ ವರ್ಷ ನಡೆದ ಜಾಟ್– ಮುಸ್ಲಿಮರ ಗಲಭೆಯಿಂದ ಜಾಟ್ ಸಮುದಾಯದ ನಿಷ್ಠೆ ಒಂದು ರಾಜಕೀಯ ಪಕ್ಷದ ಪರವಾಗಿ ಉಳಿದಿಲ್ಲ.
ಜಾತಿಯ ಕಾರಣಕ್ಕೆ ಅಜಿತ್ ಸಿಂಗ್ ನೇತೃತ್ವದ ಆರ್‌ಎಲ್‌ಡಿ ಬೆಂಬಲಿಸುತ್ತಿದ್ದ ಜಾಟರು, ಗಲಭೆಯ ನಂತರ ಬಿಜೆಪಿ ಕಡೆಗೂ ವಾಲಿದ್ದಾರೆ. ಕೇಂದ್ರ ಸರ್ಕಾರ ಚುನಾವಣೆ ಉಡುಗೊರೆಯಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೊಟ್ಟಿರುವ ಶೇ 5ರಷ್ಟು ಮೀಸಲಾತಿ ಫಲವಾಗಿ ಕೆಲವರು ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಆರ್‌ಎಲ್‌ಡಿಗೆ ಬೆಂಬಲವಾಗಿದ್ದಾರೆ.
ರಾಕೇಶ್ ಟಿಕಾಯತ್ ಆರ್‌ಎಲ್‌ಡಿ ಬಲದ ಜತೆಗೆ ಮಹೇಂದ್ರ ಸಿಂಗ್ ಟಿಕಾಯತ್ ಅವರ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಹಳ್ಳಿ, ಹಳ್ಳಿಗೂ ಹೋಗಿ ರೈತರನ್ನು ಖುದ್ದಾಗಿ ಭೇಟಿ ಮಾಡುತ್ತಿದ್ದಾರೆ. ಖಾಲಿಯಾಗಿರುವ ಮಹೇಂದ್ರ ಸಿಂಗ್ ಅವರ ಸ್ಥಾನ ತುಂಬಿ, ಹೋರಾಟಕ್ಕೆ ಶಕ್ತಿ ಕೊಡುವುದಾಗಿ ರೈತರಿಗೆ ಭರವಸೆ ನೀಡುತ್ತಿದ್ದಾರೆ.
‘ನಾನು ಸಂಸತ್ತಿನೊಳಗೆ ರೈತರ ದನಿಯಾಗುತ್ತೇನೆ. ನನಗೆ ರೈತರ ಸಮಸ್ಯೆಗಳ ಅರಿವಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಬಾಕಿ ಹಣ ಪಾವತಿಗೆ ಶ್ರಮಿಸುತ್ತೇನೆ. ಬಂದ್ ಆಗಿರುವ ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕೆ ಒತ್ತಡ ಹಾಕುತ್ತೇನೆ’ ಎಂದು ಭರವಸೆ ಕೊಡುತ್ತಿದ್ದಾರೆ.
‘ರಾಕೇಶ್ ಟಿಕಾಯತ್ ಅವರ ಮಾತನ್ನು ರೈತರು ನಂಬುತ್ತಿಲ್ಲ. ಇದುವರೆಗೆ ರೈತರಿಗಾಗಿ ಅವರು ಏನೂ ಮಾಡಿಲ್ಲ. ಮಹೇಂದ್ರ ಸಿಂಗ್ ವ್ಯಕ್ತಿತ್ವವೇ ಬೇರೆ. ಅವರಿದ್ದರೆ ಕಬ್ಬು ಬೆಳೆಗಾರರಿಗೆ ಹೀಗೆ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ಪದವಿ ವಿದ್ಯಾರ್ಥಿ ಅಮ್ರೋಹದ ಅನಿಲ್ ಬಲಿಯಾನ್ ಹೇಳುತ್ತಾರೆ. ಜಾತಿಯಲ್ಲಿ ಜಾಟರಾಗಿರುವ ಅನಿಲ್ ಕುಟುಂಬ ಸಕ್ಕರೆ ಕಾರ್ಖಾನೆ ಬಾಕಿ ಪಾವತಿಸದಿರುವುದರಿಂದ ‘ಆಲೆಮನೆ’ ಹಾಕಿದ್ದಾರೆ. ‘ನಾವು ಕಷ್ಟಪಟ್ಟು ಉತ್ಪಾದಿಸುವ ಬೆಲ್ಲಕ್ಕೂ ಬೆಲೆ ಇಲ್ಲ’ ಎನ್ನುವ ಕೊರಗು ಅನಿಲ್ ಕುಟುಂಬವನ್ನು ಕಾಡುತ್ತಿದೆ.
ಎಚ್ಚರಿಕೆ ಗಂಟೆ: ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸುವ ಉತ್ಸಾಹದಲ್ಲಿರುವ ಅನಿಲ್, ‘ನಾನು ಬಿಜೆಪಿಗೆ ಮತ ಹಾಕುತ್ತೇನೆ. ನರೇಂದ್ರ ಮೋದಿ ಕೃಷಿಕರ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ವಿಶ್ವಾಸವಿದೆ’ ಎಂದು ಹೇಳುತ್ತಾರೆ. ಈ ಮಾತು ಜಾಟ್ ಬಲವನ್ನೇ ನೆಚ್ಚಿಕೊಂಡಿರುವ ರಾಕೇಶ್ ಟಿಕಾಯತ್ ಅವರಿಗೆ ಎಚ್ಚರಿಕೆ ಗಂಟೆ ಆಗಿದೆ.
ಕೇಂದ್ರ ಸರ್ಕಾರ ಜಾಟರಿಗೆ ಶೇ 5ರಷ್ಟು ಮೀಸಲಾತಿ ಪ್ರಕಟಿಸಿದ ಬಳಿಕ ಜಾಟ್ ಮಹಾಸಭಾ, ಅಜಿತ್ ಸಿಂಗ್ ಅವರ ಆರ್‌ಎಲ್‌ಡಿಗೆ ಬೆಂಬಲ ಕೊಡುವ ತೀರ್ಮಾನ ಮಾಡಿದೆ. ಆರ್‌ಎಲ್‌ಡಿ ಅಮ್ರೋಹ ಲೋಕಸಭೆ ಸದಸ್ಯ ದೇವೇಂದ್ರ ನಾಗಪಾಲ್ ಅವರಿಗೆ ಟಿಕೆಟ್ ನಿರಾಕರಿಸಿ ರಾಕೇಶ್ ಟಿಕಾಯತ್ ಅವರನ್ನು ಕಣಕ್ಕಿಳಿಸಿದೆ. ರಾಕೇಶ್ ಅವರಿಂದಾಗಿ ಸಾಂಪ್ರದಾಯಿಕ ಜಾಟ್ ಮತಗಳು ಸಾರಾಸಗಟಾಗಿ ತಮಗೇ ಬೀಳಲಿವೆ ಎಂಬ ಲೆಕ್ಕಾಚಾರ ಅಜಿತ್ ಸಿಂಗ್ ಅವರಿಗಿದ್ದಂತಿದೆ.
ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯದ ಹುಮೈರ ಅಖ್ತರ್ ಅವರನ್ನು ಕಣಕ್ಕಿಳಿಸಿದೆ. ಮುಸ್ಲಿಂ ಸಮುದಾಯ ಸಂಪೂರ್ಣ ತಮ್ಮ ಬೆಂಬಲಕ್ಕೆ ಇದೆ ಎಂದು ಅಖ್ತರ್ ಪ್ರತಿಪಾದಿಸುತ್ತಾರೆ. ಅಮ್ರೋಹದಲ್ಲಿ ಪ್ರಬಲವಾಗಿರುವ ಸೈನಿ ಸಮಾಜ ಬಿಜೆಪಿ ಪರವಾಗಿ ನಿಂತಿದೆ. ಬಿಜೆಪಿ ಅಭ್ಯರ್ಥಿ ನಮೋ ಬಲವನ್ನು ನಂಬಿಕೊಂಡಿದ್ದಾರೆ.
ಮುಜಫ್ಫರ್‌ನಗರದ ಗಲಭೆ ಪರಿಣಾಮ ಅಮ್ರೋಹದ ಮೇಲೆ ಆಗಿಲ್ಲ. ನಮ್ಮಲ್ಲಿ ಇನ್ನೂ ಹಿಂದೂ– ಮುಸ್ಲಿಮರು ಎನ್ನುವ ಭಾವನೆ ತಲೆಯೊಳಗೆ ಮೊಳಕೆಯೊಡೆದಿಲ್ಲ. ಅದೇ ಕಾರಣಕ್ಕೆ ಇದುವರೆಗೆ ಯಾವುದೇ ಗಲಭೆಯೂ ನಡೆದಿಲ್ಲ. ಆದರೆ, ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಮತದಾರರನ್ನು ಸಂಘಟಿಸುತ್ತಿವೆ. ಅವರ ಪ್ರಯತ್ನ ಫಲಕಾರಿಯಾದರೆ ರಾಕೇಶ್ ಟಿಕಾಯತ್ ಅವರಿಗೆ ಕಷ್ಟವಾಗಬಹುದು ಎಂದು ರಾಜೀವ್ ಶರ್ಮಾ ಅಭಿಪ್ರಾಯಪಡುತ್ತಾರೆ.
ಅಮ್ರೋಹ ಸಮೀಪದ ಬರ್ಖೇಡ ಸಾದತ್ ಗ್ರಾಮದವರಾದ ರಾಜೀವ್ ಶರ್ಮ ವೃತ್ತಿಯಲ್ಲಿ ಪಂಡಿತರು, ರಾಜೀವ್ ಶರ್ಮಾ ಮಾತನ್ನು ಒಪ್ಪುವ ಅಮ್ರೋಹದ ವ್ಯಾಪಾರಿ ಸುಶೀಲ್ ಕುಮಾರ್ ಶರ್ಮಾ ಮುಜಫ್ಫರ್‌ನಗರದ ಗಲಭೆ ಪ್ರತ್ಯಕ್ಷವಾಗಿ ಪರಿಣಾಮ ಮಾಡದಿದ್ದರೂ ಒಳಗೊಳಗೇ ಆಗುತ್ತಿದೆ ಎಂದು ಹೇಳುತ್ತಾರೆ.
ಜಾಟರು ಕೈಕೊಡಬಹುದು ಎಂಬ ಆತಂಕದಲ್ಲಿರುವ ರಾಕೇಶ್ ಟಿಕಾಯತ್ ರೈತರಿಗೆ ಜಾತಿ ಇಲ್ಲ. ಎಲ್ಲ ಜಾತಿಯಲ್ಲೂ ರೈತರಿದ್ದಾರೆ. ಎಲ್ಲ ರೈತರ ಸಮಸ್ಯೆಯೂ ಒಂದೇ ಎಂದು ಹೇಳಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಅಮ್ರೋಹದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಜಾಟವ (ದಲಿತ) ಸಮುದಾಯದ ಮತಗಳ ಮೇಲೆ ಬಿಎಸ್‌ಪಿ ಕಣ್ಣಿಟ್ಟಿದೆ. ಅಪ್ಪನ ಜನಪ್ರಿಯತೆ ನಂಬಿಕೊಂಡಿರುವ ರಾಕೇಶ್ ಟಿಕಾಯತ್ ಅವರನ್ನು ಅಮ್ರೋಹದ ಮತದಾರರು ಕೈಹಿಡಿಯುವರೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.