ಭುವನೇಶ್ವರ: ಒಡಿಶಾ ಹಾಗೂ ಸೀಮಾಂಧ್ರ ರಾಜ್ಯಗಳ ಗಡಿಯಲ್ಲಿರುವ 21 ಗ್ರಾಮಗಳ ಸಮೂಹವಾದ ‘ಕೋಟಿಯಾ’ ಪ್ರದೇಶದ ಜನತೆ ಚುನಾವಣೆ ವೇಳೆ ಎರಡೆರೆಡು ಬಾರಿ ಮತ ಚಲಾಯಿಸುವ ವಿಶೇಷ ಅವಕಾಶ ಪಡೆದುಕೊಂಡಿದೆ!
ಗಡಿಯಲ್ಲಿರುವ ಕಾರಣ ಎರಡೂ ರಾಜ್ಯಗಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಇವರಿಗೆ ಒದಗಿ ಬಂದಿದೆ. ಏಪ್ರಿಲ್ 10ರಂದು ನಡೆದ ಚುನಾವಣೆಯಲ್ಲಿ ಈ ಗ್ರಾಮಗಳಲ್ಲಿ ಕೋರಾಪುಟ್ ಜಿಲ್ಲಾಡಳಿತದಿಂದ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಗ ಶೇ 60ರಷ್ಟು ಮತದಾನವೂ ಆಗಿತ್ತು. ಕೋರಾಪುಟ್ ಹಾಗೂ ಪೊಟಾಂಗಿ ವಿಧಾನಸಭೆ ಕ್ಷೇತ್ರಗಳಿಗೆ ಆಗ ಮತದಾನ ನಡೆದಿತ್ತು.
ಈಗ ಬುಧವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮತ್ತೆ ಸೀಮಾಂಧ್ರದ ವಿಜಯನಗರಂ ಲೋಕಸಭೆ ಹಾಗೂ ಪಾಲೂರ್ ವಿಧಾನಸಭೆ ಕ್ಷೇತ್ರಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಭಾಗ್ಯ ಈ ಗ್ರಾಮದವರದಾಗಿತ್ತು. ಈ ವಿವಾದಿತ ಗ್ರಾಮಗಳಲ್ಲಿ ಈ ರೀತಿ ಎರಡೆರಡು ಬಾರಿ ಮತದಾನ ವ್ಯವಸ್ಥೆ ನಡೆದಿರುವುದು ಇದೇ ಮೊದಲೇನಲ್ಲ. 2009ರ ಲೋಕಸಭೆ ಚುನಾವಣೆ, ಎರಡೂ ರಾಜ್ಯಗಳ ವಿಧಾನಸಭೆ ಹಾಗೂ ಪಂಚಾಯಿತಿ ಚುನಾವಣೆಗಳಲ್ಲಿಯೂ ಈ ರಾಜ್ಯಗಳಿಂದ ಮತದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಶೇಷವೆಂದರೆ ಪ್ರತಿಬಾರಿಯೂ ಈ ಗ್ರಾಮಗಳ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಿದೆ. ಕೆಲವರು ಎರಡೆರಡು ಗುರುತಿನ ಚೀಟಿಗಳನ್ನೂ ಹೊಂದಿದ್ದಾರೆ.
ಈ ಕುರಿತು ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಪ್ರಶ್ನಿಸಿದರೆ, ‘ಎರಡೆರಡು ಗುರುತಿನ ಚೀಟಿ ಹೊಂದುವುದು ಕಾನೂನು ಬಾಹಿರ. ಆದರೆ ಇದೇನು ವಿಶೇಷವಲ್ಲ. ಎಲ್ಲ ಕಡೆ ಗಡಿ ಪ್ರದೇಶಗಳಲ್ಲಿನ ಗ್ರಾಮದ ಹಲವರು ಇದೇ ರೀತಿ ಎರಡು ಗುರುತಿನ ಚೀಟಿ ಹೊಂದಿದ್ದಾರೆ’ ಎಂದು ಉತ್ತರಿಸುತ್ತಾರೆ.
‘ಚುನಾವಣೆ ಸಂದರ್ಭದಲ್ಲಿ ಈ ಗ್ರಾಮಗಳಲ್ಲಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ವಿಭಾಗೀಯ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ತಂಡವೊಂದನ್ನು ನೇಮಿಸಲಾಗಿದೆ’ ಎಂದು ಕೋರಾಪುಟ್ ಜಿಲ್ಲಾಡಳಿತ ತಿಳಿಸಿದೆ. ಈ ಗ್ರಾಮಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಎರಡೂ ರಾಜ್ಯಗಳು ದಶಕಗಳಿಂದ ಗುದ್ದಾಡುತ್ತಿವೆ. ಈ ಕುರಿತು 1966ರಿಂದಲೂ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.