ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನಾಯಕತ್ವದ ಬಿಜು ಜನತಾ ದಳ (ಬಿಜೆಡಿ) 2014ರ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಯ ಹೊಸ್ತಿಲಲ್ಲಿದೆ. 1997ರಲ್ಲಿ ಸ್ಥಾಪನೆಗೊಂಡ ಪಕ್ಷ ಇದೇ ಮೊದಲ ಬಾರಿಗೆ ಮಿತ್ರ ಪಕ್ಷಗಳಿಲ್ಲದೆ ಚುನಾವಣೆ ಎದುರಿಸುತ್ತಿದೆ. ಕಳೆದ 15 ವರ್ಷಗಳ ಪಕ್ಷದ ಸಾಧನೆ ಮತ್ತು ರಾಜ್ಯದಲ್ಲಿ ಅದು ಹೊಂದಿರುವ ಜನಪ್ರಿಯತೆ ಈ ಬಾರಿ ಪರೀಕ್ಷೆಗೊಳಪಡಲಿದೆ.
2009ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆಯಲ್ಲಿ ಮಿತ್ರಪಕ್ಷಗಳೊಂದಿಗೆ ಬಿಜೆಡಿ 21 ಲೋಕಸಭಾ ಸ್ಥಾನಗಳ ಪೈಕಿ 14 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 147 ವಿಧಾನಸಭಾ ಸ್ಥಾನಗಳಲ್ಲಿ 103 ಬಿಜೆಡಿಗೆ ಸಿಕ್ಕಿತ್ತು. ಮಿತ್ರಪಕ್ಷಗಳಾದ ಸಿಪಿಐ ಮತ್ತು ಎನ್‌ಸಿಪಿ ಕ್ರಮವಾಗಿ ಒಂದು ಮತ್ತು ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದವು.
ಬಿಜೆಡಿಯ ಮತ ಪ್ರಮಾಣ ಶೇ 37.2. ಇತರ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ ಶೇ 32.7 ಮತ್ತು ಶೇ 16.9ರಷ್ಟು ಮತ ಗಳಿಸಿದ್ದವು.
ಈ ಬಾರಿ ಬಿಜೆಡಿ ಇತರ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಹೊಂದಿಲ್ಲ. 1998, 1999 ಮತ್ತು 2004ರ ಲೋಕಸಭೆ ಮತ್ತು 2004 ಹಾಗೂ 2009ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಬಿಜೆಡಿ ಮೈತ್ರಿ ಹೊಂದಿತ್ತು. 2009ರಲ್ಲಿ ಸಿಪಿಐ, ಸಿಪಿಎಂ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಎಲ್ಲ 147 ವಿಧಾನಸಭೆ ಮತ್ತು 21 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಡಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 10ರಂದು ನಡೆದಿದ್ದು ಎರಡೇ ಮತ್ತು ಕೊನೆಯ ಹಂತದ ಮತದಾನ ಏಪ್ರಿಲ್ 17ರಂದು ನಡೆಯಲಿದೆ.
ಪಟ್ನಾಯಕ್ ಜನಪ್ರಿಯತೆಯೇ ದೊಡ್ಡ ಶಕ್ತಿ: ಕಳೆದ 14 ವರ್ಷಗಳ ಬಿಜೆಡಿ ಸರ್ಕಾರ ಒಡಿಶಾದ ಹಿಂದಿನ ಕಾಂಗ್ರೆಸ್ ಸರ್ಕಾರಗಳಿಗಿಂತ ಉತ್ತಮ ಎಂದು ಬಿಜೆಡಿ ಹೇಳುತ್ತಿದೆ. ಈ ಸಾಧನೆ ಮತ್ತು ಪಕ್ಷದ ಅಧ್ಯಕ್ಷ ನವೀನ್ ಪಟ್ನಾಯಕ್ ಅವರ ಜನಪ್ರಿಯತೆಯನ್ನೇ ಪಕ್ಷ ನೆಚ್ಚಿಕೊಂಡಿದೆ. ಪಟ್ನಾಯಕ್ ಅವರು ಮಾತ್ರ ಈ ಪ್ರಾದೇಶಿಕ ಪಕ್ಷದ ಏಕೈಕ ತಾರಾ ಪ್ರಚಾರಕ.
ಈ ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಡಿ ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆ ಸಮಯ ಸಿಕ್ಕಾಗ ಸುದ್ದಿ ವಾಹಿನಿಗಳು ಮತ್ತು ಪತ್ರಕರ್ತರೊಂದಿಗೆ ಮಾತನಾಡುತ್ತಾ ಪಟ್ನಾಯಕ್ ಹೇಳುತ್ತಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಬಿಜೆಡಿ ಹಿಂದಿನ ಸಾಧನೆಯನ್ನು ಪುನರಾವರ್ತಿಸಲಿದೆ ಎಂದು ಎಲ್ಲ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿರುವುದು ಪಟ್ನಾಯಕ್ ಅವರ ಆತ್ಮವಿಶ್ವಾಸಕ್ಕೆ ಒಂದು ಕಾರಣ.
ಈ ಬಾರಿಯೂ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾದರೆ ಸತತ ನಾಲ್ಕು ಅವಧಿಗೆ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಅವರದ್ದಾಗಲಿದೆ.
ದುರ್ಬಲ ಎದುರಾಳಿಗಳು: 2009ರ ಚುನಾವಣೆಯ ಹಾಗೆಯೇ ಈ ಬಾರಿಯೂ ಬಿಜೆಡಿಗೆ ಕಾಂಗ್ರೆಸ್ ಮತ್ತು ಒಂದು ಕಾಲದ ಮಿತ್ರಪಕ್ಷ ಬಿಜೆಪಿ ಪ್ರಧಾನ ಎದುರಾಗಳಿಗಳು.
ರಾಜ್ಯ ಕಾಂಗ್ರೆಸ್‌ನೊಳಗಿನ ಒಳಜಗಳ ಬಿಜೆಡಿಗೆ ದೊಡ್ಡ ವರದಾನ. ಒಡಿಶಾದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ರಾಜ್ಯದ ರಾಜಧಾನಿ ಭುವನೇಶ್ವರದ ಬದಲಿಗೆ ದೆಹಲಿಯಲ್ಲಿ ನಡೆಸಲಾಗಿತ್ತು. ಬಣಗಳ ನಡುವೆ ಹಿಂಸಾಚಾರ ನಡೆಯಬಹುದು ಎಂಬ ಭೀತಿಯೇ ಇದಕ್ಕೆ ಕಾರಣ.
ಮುಜುಗರ ತಂದ ಪಕ್ಷಾಂತರ: ಈ ಒಳಜಗಳ ಸಾಲದು ಎಂಬಂತೆ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳಿರುವಾಗ ಪಕ್ಷದ ನಾಯಕರ ದಂಡೇ ಬಿಜೆಡಿಗೆ ಪಕ್ಷಾಂತರ ಮಾಡಿತು. ಶಾಸಕರು, ಮಾಜಿ ಶಾಸಕರು, ರಾಜ್ಯದ ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಇದರಲ್ಲಿ ಸೇರಿದ್ದಾರೆ.
40 ವರ್ಷಗಳಿಂದ ಪಕ್ಷದಲ್ಲಿದ್ದ, ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರೂ ಆಗಿದ್ದ ಭೂಪೀಂದರ್ ಸಿಂಗ್ ಆಡಳಿತ ಪಕ್ಷ ಸೇರಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯೊಂದಿಗೆ ಮುಜುಗರಕ್ಕೂ ಕಾರಣವಾಯಿತು. ಬಿಜೆಪಿ ಮತ್ತು ಜೆಎಂಎಂಗಳಿಂದಲೂ ನಾಯಕರು ಬಿಜೆಡಿಗೆ ಸೇರಿದ್ದಾರೆ. ಆದರೆ ಆ ಪ್ರಮಾಣ ಕಾಂಗ್ರೆಸ್‌ನಷ್ಟು ಇರಲಿಲ್ಲ.
ಒಳಜಗಳ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಬಹುದು. ಸುಂದರಗಡ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೇಮಾನಂದ ಬಿಸ್ವಾಲ್ ಸ್ಪರ್ಧಿಸುತ್ತಿದ್ದು ಕೇಂದ್ರದ ಮಾಜಿ ಸಚಿವ ಜೋಯೆಲ್ ಓರಮ್ ಮತ್ತು ಹಾಕಿ ಆಟಗಾರ ಬಿಜೆಡಿಯ ದಿಲೀಪ್ ಟರ್ಕಿ ಅವರಿಂದ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. ಕಳೆದ ಬಾರಿ ಇಲ್ಲಿ ಬಿಸ್ವಾಲ್ ಸುಲಭವಾಗಿ ಜಯ ಗಳಿಸಿದ್ದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಲೋಕಸಭೆ ಮತ್ತು 27 ವಿಧಾನಸಭೆ ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಈ ಪ್ರಮಾಣದ ಯಶಸ್ಸೂ ಕಾಂಗ್ರೆಸ್ಸಿಗೆ ಸಿಗದು ಎಂದು ಹೇಳಲಾಗುತ್ತಿದೆ.
ಬಿಜೆಪಿಗೂ ನೆಲೆ ಇಲ್ಲ: ಬಿಜೆಪಿಯು ಮೋದಿ ಅಲೆಯ ಮೇಲೆಯೇ ಅಲವಂಬಿತವಾಗಿದೆ. ಕೆಲವು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಇದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದರೂ ಆಗಬಹುದು. ಈತನಕ ಇಲ್ಲಿ ಬಿಜೆಪಿ ಲೋಕಸಭಾ ಸ್ಥಾನಗಳನ್ನು ಗೆದ್ದಿಲ್ಲ.
ಕಳೆದ ಚುನಾವಣೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಈ ಸಂಖ್ಯೆ ಹೆಚ್ಚಬಹುದು ಎಂಬ ನಿರೀಕ್ಷೆ ಬಿಜೆಪಿಗೆ ಇದೆ.
ಒಡಿಶಾ ಸಿನಿಮಾ ರಂಗದ ಹಲವರು ರಾಜಕೀಯದಲ್ಲಿ ಆಸಕ್ತಿ ತೋರುತ್ತಿರುವುದು ಈ ಬಾರಿಯ ಹೊಸ ಬೆಳವಣಿಗೆ. ಬಿಜೆಡಿ ಮತ್ತು ಕಾಂಗ್ರೆಸ್ ಹಲವು ಸಿನಿಮಾ ತಾರೆಯರನ್ನು ಕಣಕ್ಕೆ ಇಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.