ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಇದೇ 31ರಂದು ಧ್ಯಾನ ಮಾಡಲಿದ್ದಾರೆ.
ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಜೂನ್ 1ರಂದು ನಡೆಯಲಿದ್ದು, ಅದಕ್ಕೂ ಮುನ್ನಾ ದಿನ ಧ್ಯಾನ ಕೈಗೊಳ್ಳುವ ಪ್ರಧಾನಿ ಮೋದಿ ಅವರ ಈ ನಡೆಯು ರಾಷ್ಟ್ರೀಯ ಏಕತೆಯ ಸಂದೇಶ ರವಾನಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಮೋದಿ ಅವರು ಮೇ 30ರಂದು ಕನ್ಯಾಕುಮಾರಿಗೆ ಭೇಟಿ ನೀಡಲಿದ್ದು, 2–3 ದಿನ ಕಳೆಯಲಿದ್ದಾರೆ.
ಸ್ವಾಮಿ ವಿವೇಕಾನಂದ ಅವರು ಧ್ಯಾನ ಕೈಗೊಂಡಿದ್ದ ಸ್ಥಳ ‘ಧ್ಯಾನ ಮಂಟಪಂ’ನಲ್ಲಿಯೇ ಮೋದಿ ಅವರು ಈ ಭೇಟಿ ವೇಳೆ ಧ್ಯಾನ ಕೈಗೊಳ್ಳುವರು. ಈ ಸ್ಥಳವು ತಮಿಳಿನ ಸಂತ ಕವಿ ತಿರುವಳ್ಳುವರ್ ಪ್ರತಿಮೆ ಸನಿಹದಲ್ಲಿದೆ.
2019ರ ಮೇನಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿ, ರುದ್ರ ಗುಹೆಯಲ್ಲಿ ಧ್ಯಾನ ನಡೆಸಿದ್ದರು. 2014ರ ಸಾರ್ವತ್ರಿಕ ಚುನಾವಣೆ ಕೊನೆಗೊಂಡ ನಂತರ ಅವರು ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್ ವಿರುದ್ಧದ ಕಾಳಗದಲ್ಲಿ ಜಯಶಾಲಿಯಾಗಿದ್ದ ಸ್ಥಳ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.