ಚೆನ್ನೈ: ‘ಇಂಡಿಯಾ’ ಮೈತ್ರಿಕೂಟವು ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಪ್ರಧಾನಿ ಮೋದಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಡಿಎಂಕೆ ಮನವಿ ಮಾಡಿದೆ.
‘'ಇಂಡಿಯಾ’ ಮೈತ್ರಿಕೂಟವು ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಅವರು (ಇಂಡಿಯಾ ಮೈತ್ರಿಕೂಟ) ಹಿಂದುತ್ವದ ವಿರುದ್ಧದ ಯೋಚನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇತರ ಧರ್ಮಗಳ ವಿರುದ್ಧ ಮಾತನಾಡದ ಅವರು, ಅವಕಾಶ ಸಿಕ್ಕಾಗಲೆಲ್ಲ ಒಂದು ಸೆಕೆಂಡು ಕೂಡ ವ್ಯರ್ಥ ಮಾಡದೇ ಹಿಂದುತ್ವವನ್ನು ಅವಮಾನಿಸುತ್ತಾರೆ. ನಾವು ಇದನ್ನು ಹೇಗೆ ಸಹಿಸಿಕೊಳ್ಳಬೇಕು?, ಇದನ್ನು ನಾವು ಹೇಗೆ ಒಪ್ಪಿಕೊಳ್ಳಬೇಕು?’ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ ಎಂದು ಡಿಎಂಕೆ ತಿಳಿಸಿದೆ.
ಚುನಾವಣಾ ಆಯೋಗಕ್ಕೆ ಮಾರ್ಚ್ 21ರಂದು ಪತ್ರ ಬರೆದಿರುವ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್. ಎಸ್. ಭಾರತಿ, ‘ಮುಂಬರುವ ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಪ್ರಚಾರ ನಡೆಸುವ ವೇಳೆ ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯು, 1951ರ ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ’ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಮಧ್ಯಪ್ರವೇಶಿಸುವ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ತಪ್ಪು ಹೇಳಿಕೆಗಳು, ಧರ್ಮ ಮತ್ತು ವಿಭಜನೆಯಂತಹ ವಿಧಾನಗಳನ್ನು ಅನುಸರಿಸುವ ಚುನಾವಣಾ ಪ್ರಚಾರಗಳನ್ನು ನಿಲ್ಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಈ ದೂರನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾನೂನಿನ ಚೌಕಟ್ಟಿನೊಳಗೆ ನಡೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಚುನಾವಣಾ ಆಯೋಗದಲ್ಲಿ ನಾನು ಮನವಿ ಮಾಡುತ್ತೇನೆ’ ಎಂದು ಭಾರತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.