ಪಟ್ನಾ: ‘ಮುಸ್ಲಿಮರ ಮತಗಳನ್ನು ಪಡೆಯಲು ವಿರೋಧ ಪಕ್ಷಗಳು ಈಗ ಮುಜ್ರಾ (ಮೊಘಲರ ಕಾಲದಲ್ಲಿ ಹಾಗೂ ನಂತರ ವೇಶ್ಯೆಯರಿಂದ ಪ್ರದರ್ಶಿಸಲಾಗುತ್ತಿದ್ದ ಮಾದಕ ನೃತ್ಯ) ಮಾಡುತ್ತಿವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಆರ್‌ಜೆಡಿ ಮುಖಂಡ ಮನೋಜ್ ಕುಮಾರ್ ಜಾ ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದ ಪಾಟಲಿಪುತ್ರದಲ್ಲಿ ಶನಿವಾರ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ವಿರುದ್ಧ ‘ಮುಜ್ರಾ’ ಪದ ಬಳಕೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮನೋಜ್ ಕುಮಾರ್, ‘ಮೀನು, ಮಾಂಸ ಹಾಗೂ ಮಂಗಳಸೂತ್ರದ ನಂತರ ಇದೀಗ ಮುಜ್ರಾ ಪದವನ್ನು ಪ್ರಧಾನಿ ಬಳಸಿದ್ದಾರೆ. ದೇಶದ ಪ್ರಧಾನಿಯೊಬ್ಬರಿಗೆ ಇಂಥ ಪದ ಬಳಕೆಯ ಅಗತ್ಯವಿತ್ತೇ? ನಾಗರಿಕ ವ್ಯಕ್ತಿಗೆ ಇರಬೇಕಾದ ಶೋಭೆಯನ್ನೇ ಇವರು ಛಿದ್ರಗೊಳಿಸಿದ್ದಾರೆ’ ಎಂದು ಮನೋಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗ ಮತ್ತು ದಲಿತರಿಗೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಮೂಲಕ ‘ಮತ ಜಿಹಾದ್’ ನಡೆಸಿದ್ದಾರೆ ಎಂದು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವನ್ನು ಟೀಕಿಸುವ ಸಂದರ್ಭದಲ್ಲಿ ಮೋದಿ ಅವರು ‘ಮುಜ್ರಾ‘ ಪದ ಬಳಕೆ ಮಾಡಿದ್ದರು.
‘ಮುಸ್ಲಿಮರಲ್ಲಿ ಹಿಂದುಳಿದವರಿಗೆ ಕಳೆದ ಹಲವು ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲೂ ಮೀಸಲಾತಿ ನೀಡಲಾಗುತ್ತಿದೆ. ಈ ರಾಜ್ಯದಲ್ಲಿ ಮೋದಿ ಅವರೇ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಮೋದಿ ಅವರು ಯಾವ ಜಾತಿಗೆ ಸೇರಿದ್ದಾರೋ, ಅದೇ ಜಾತಿ ಮುಸ್ಲಿಮರಲ್ಲೂ ಇದೆ. ಗುಜರಾತ್‌ನಲ್ಲಿ ಅವರಿಗೂ ಮೀಸಲಾತಿ ಕೊಡಲಾಗುತ್ತಿದೆ’ ಎಂದು ಜಾ ಹೇಳಿದ್ದಾರೆ.
‘ಪ್ರಧಾನಿ ಅವರೊಂದಿಗೆ ವಿಚಾರಗಳ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಅವರ ಇತ್ತೀಚಿನ ಹೇಳಿಕೆಯನ್ನು ಗಮನಿಸಿದರೆ, ಅವರಿಗೆ ತುರ್ತಾಗಿ ವೈದ್ಯಕೀಯ ನೆರವಿನ ಅಗತ್ಯವಿದೆ. ತಾನು ದೈವೀಕ ಶಕ್ತಿಯಾಗಿದ್ದೇನೆ ಎಂಬ ಹೇಳಿಕೆಯನ್ನು ಮೋದಿ ಅವರು ನೀಡಿದ್ದಾರೆ. ಇದು ಭ್ರಮೆಯ ಸಂಕೇತವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.