ADVERTISEMENT

LS polls | ಮೊದಲ ಹಂತದ ಮತದಾನದ ಬಳಿಕ ಮೋದಿ ಭಯಭೀತರಾಗಿದ್ದಾರೆ: KC ವೇಣುಗೋಪಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2024, 4:19 IST
Last Updated 26 ಏಪ್ರಿಲ್ 2024, 4:19 IST
ಕೆ.ಸಿ. ವೇಣುಗೋಪಾಲ್
ಕೆ.ಸಿ. ವೇಣುಗೋಪಾಲ್   

ಆಲಪ್ಪುಳ (ಕೇರಳ): ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಯಭೀತರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ಕರ್ನಾಟಕದ 14, ಕೇರಳದ 20 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕೇರಳ ಆಲಪ್ಪುಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಗಿರುವ ಕೆ.ಸಿ. ವೇಣುಗೋಪಾಲ್ ಅವರು ಇಂದು ಬೆಳಿಗ್ಗೆ ಮತ ಚಲಾಯಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಲಪ್ಪುಳದ ಜನರು ನನ್ನೊಂದಿಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ನಂತರ ಪ್ರಧಾನಿ ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಸಾರ್ವಜನಿಕ ವೇದಿಕೆಗೆ ತಂದು ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ್ದಕ್ಕಾಗಿ ನಾನು ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

ADVERTISEMENT

‘ನಮ್ಮ ಪ್ರಣಾಳಿಕೆಯು ಸಾಮಾನ್ಯ ಜನರನ್ನು ಒಳಗೊಂಡಿದೆ. ಆದರೆ, ಬಿಜೆಪಿಯದ್ದು ಅದಾನಿ, ಅಂಬಾನಿ ಅವರಿಗಾಗಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಎಲ್ಲಾ 20 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಬಿಜೆಪಿ ಮತ್ತು ಸಿಪಿಎಂ ನಾಯಕರು ರಾಹುಲ್ ಗಾಂಧಿಯ ವಿರುದ್ಧ ಎಷ್ಟೇ ವಾಗ್ದಾಳಿ ನಡೆಸಿದರೂ ವಯನಾಡ್‌ನ ಜನತೆ ಅವರೊಂದಿಗಿದ್ದಾರೆ’ ಎಂದು ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಲಪ್ಪುಳ ಕ್ಷೇತ್ರದಲ್ಲಿ ವೇಣುಗೋಪಾಲ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಎಂ) ಅಭ್ಯರ್ಥಿ ಎ.ಎಂ. ಆರಿಫ್ ಮತ್ತು ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ವಿರುದ್ಧ ಸೆಣಸಾಟ ನಡೆಸುತ್ತಿದ್ದಾರೆ.

ಆಲಪ್ಪುಳ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ವೇಣುಗೋಪಾಲ್ ಅವರು 2009 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಏಳು ಹಂತಗಳ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟಗೊಳ್ಳಲಿದೆ. ಏಪ್ರಿಲ್‌ 19ರಂದು ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.