ADVERTISEMENT

ಯುವಕನಿಂದ 8 ಬಾರಿ ಬಿಜೆಪಿಗೆ ಮತ?: ‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಕ್ರಮ; ರಾಹುಲ್

ಪಿಟಿಐ
Published 20 ಮೇ 2024, 2:47 IST
Last Updated 20 ಮೇ 2024, 2:47 IST
Venugopala K.
   Venugopala K.

ನವದೆಹಲಿ: ಮತದಾನದ ಸಂದರ್ಭ ಸಾಂವಿಧಾನಿಕ ಕರ್ತವ್ಯ ಮರೆತು, ಒತ್ತಡಕ್ಕೆ ಸಿಲುಕಿ ಲೋಪ ಎಸಗಿದರೆ ಇಂಡಿಯಾ ಬಣ ಅಧಿಕಾರಕ್ಕೆ ಬಂದ ಬಳಿಕ ಕಠಿಣ ಕ್ರಮ ಜರುಗಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಒಬ್ಬ ವ್ಯಕ್ತಿ ಬಿಜೆಪಿಗೆ 8 ಬಾರಿ ಮತದಾನ ಮಾಡಿದ್ದಾನೆನ್ನಲಾದ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಎಟಾ ಜಿಲ್ಲೆಯ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮತಗಟ್ಟೆ ಅಧಿಕಾರಿಯನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಆ ಮತಗಟ್ಟೆಯಲ್ಲಿ ಮರುಮತದಾನಕ್ಕೂ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

‘ಈ ವಿಡಿಯೊ ನೋಡಿದರೆ ತಮ್ಮ ಸೋಲಿನಿಂದ ತಪ್ಪಿಸಿಕೊಳ್ಳಲು ಬಿಜೆಪಿ, ಜನರ ನಿರ್ಣಯವನ್ನು ಬದಿಗೊತ್ತಿ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿ ಪ್ರಜಾಪ್ರಭುತ್ವದ ಲೂಟಿಗೆ ಮುಂದಾಗಿದೆ’ ಎಂದು ರಾಹುಲ್ ಕಿಡಿ ಕಾರಿದ್ದಾರೆ.

ಆಡಳಿತದಲ್ಲಿರುವವರ ಒತ್ತಡಕ್ಕೆ ಮಣಿಯದೇ ಚುನಾವಣೆ ಸಿಬ್ಬಂದಿ ತಮ್ಮ ಸಾಂವಿಧಾನಿಕ ಕರ್ತವ್ಯ ಅರಿತು ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಂಬಿದೆ. ಇಲ್ಲವಾದರೆ, ‘ಇಂಡಿಯಾ’ ಅಧಿಕಾರಕ್ಕೆ ಬಂದ ಕೂಡಲೇ ಕರ್ತವ್ಯ ಲೋಪ ಎಸಗಿದವವರ ವಿರುದ್ಧ ಕ್ರಮ ಆಗುತ್ತದೆ. ಸಾಂವಿಧಾನಿಕ ಪ್ರತಿಜ್ಞೆ ಉಲ್ಲಂಘಿಸುವ ಮುನ್ನ 10 ಬಾರಿ ಯೋಚಿಸಿ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.