ADVERTISEMENT

ಕಾಂಗ್ರೆಸ್‌: ರಾಷ್ಟ್ರೀಯ ವಕ್ತಾರ ರೋಹನ್ ಗುಪ್ತಾ ರಾಜೀನಾಮೆ

‘ಹಿರಿಯ ನಾಯಕರೊಬ್ಬರಿಂದ ಅವಮಾನ, ಚಾರಿತ್ರ್ಯಹರಣ’

ಪಿಟಿಐ
Published 22 ಮಾರ್ಚ್ 2024, 16:24 IST
Last Updated 22 ಮಾರ್ಚ್ 2024, 16:24 IST
   

ಅಹಮದಾಬಾದ್: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ರೋಹನ್ ಗುಪ್ತಾ ಅವರು ‘ಅವಮಾನ’ ಮತ್ತು ‘ಚಾರಿತ್ರ್ಯಹರಣ’ದ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಇತರ ಎಲ್ಲ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.

ಗುಪ್ತಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಬರೆದಿದ್ದು, ಅದನ್ನು ‘ಎಕ್ಸ್‌’ ವೇದಿಕೆಯಲ್ಲೂ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವು ಗುಪ್ತಾ ಅವರನ್ನು ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ, ತಮ್ಮ ತಂದೆಯ ಅನಾರೋಗ್ಯದ ನೆಪವೊಡ್ಡಿ ಗುಪ್ತಾ ಕಣದಿಂದ ಹಿಂದೆ ಸರಿದಿದ್ದರು.

ADVERTISEMENT

‘ಪಕ್ಷದ ಸಂವಹನ ವಿಭಾಗಕ್ಕೆ ಸಂಬಂಧಿಸಿದ ಹಿರಿಯ ನಾಯಕರೊಬ್ಬರಿಂದ ನಾನು ಕಳೆದ ಎರಡು ವರ್ಷದಿಂದ ನಿರಂತರ ಅವಮಾನ ಮತ್ತು ಚಾರಿತ್ರ್ಯಹರಣ ಅನುಭವಿಸಿದ್ದೇನೆ. ಅದೇ ಹೊತ್ತಿಗೆ ಖಾಸಗಿ ಬಿಕ್ಕಟ್ಟು ನನ್ನನ್ನು ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆ ನಿರ್ಧಾರವು ಅತ್ಯಂತ ಕಠಿಣವಾಗಿತ್ತು. ಆದರೆ, ತನ್ನ ಆತ್ಮಗೌರವ ಕಾಪಾಡಿಕೊಳ್ಳಲು ಅನಿವಾರ್ಯವಾಗಿತ್ತು ಎಂದು ಗುಪ್ತಾ ತಿಳಿಸಿದ್ದಾರೆ.

ರೋಹನ್ ಗುಪ್ತಾ ಅವರ ತಂದೆ ರಾಜ್‌ಕುಮಾರ್ ಗುಪ್ತಾ ಎರಡು ದಶಕಗಳ ಹಿಂದೆ ಕಾಂಗ್ರೆಸ್‌ನಿಂದ ಅಹಮದಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಅವರು ತಮ್ಮ ಮಗ ರೋಹನ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತೀವ್ರವಾಗಿ ವಿರೋಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.