ADVERTISEMENT

ಇತರ ಪಕ್ಷಗಳ ನಾಯಕರು ಮೋದಿಗಿಂತ ಸಮರ್ಥರು: ಹರಿದಾಡುತ್ತಿದೆ ನಾಯ್ಡು ಹೇಳಿಕೆ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2024, 10:05 IST
Last Updated 5 ಜೂನ್ 2024, 10:05 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: ‘ದೇಶದ ಹಿತಕ್ಕೆ ಅಗತ್ಯವಿರುವ ಸಹಕಾರ ಒಕ್ಕೂಟ ಸರ್ಕಾರದ ರಚನೆಗಾಗಿ ಹೋರಾಡುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ನರೇಂದ್ರ ಮೋದಿಗಿಂತ ಉತ್ತಮರು’ ಎಂಬ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್.ಚಂದ್ರಬಾಬು ನಾಯ್ಡು ಅವರ ಹೇಳಿಕೆಯುಳ್ಳ ವಿಡಿಯೊಂದು ಈಗ ಎಲ್ಲೆಡೆ ಹರಿದಾಡುತ್ತಿದೆ.

ವರ್ಷದ ಹಿಂದೆ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ನಾಯ್ಡು ಅವರು ಕೇಂದ್ರದಲ್ಲಿದ್ದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಯಾಡಿದ್ದರು. ತನಿಖಾ ಸಂಸ್ಥೆಗಳನ್ನು ಸರ್ಕಾರ ತನ್ನ ಕೈವಶ ಮಾಡಿಕೊಂಡು ಸರ್ವನಾಶ ಮಾಡುತ್ತಿದೆ ಎಂದು ಆ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. 

‘ಒಂದು ಕಾಲದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಒತ್ತಡದಿಂದಾಗಿ ನಾವು ಬಿಜೆಪಿ ಸೇರಿದ್ದೆವು. ಆದರೆ ದೇಶದಲ್ಲಿ ಇಂದು ಪ್ರಜಾಪ್ರಭುತ್ವಕ್ಕೇ ಒತ್ತಡ ಸೃಷ್ಟಿಯಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳ ಮೂಲತತ್ವವನ್ನೇ ನಾಶ ಮಾಡಲಾಗಿದೆ’ ಎಂದು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಭಾರತ ಒಂದು ಅದ್ಭುತ ರಾಷ್ಟ್ರ. ನಮ್ಮದು ಜಾತ್ಯಾತೀತ ಪಕ್ಷ. ಈ ದೇಶದಲ್ಲಿರುವುದು ಮತ್ತು ಇರಬೇಕಿರುವುದು ಸಹಕಾರ ಇರುವ ಒಕ್ಕೂಟದ ಸರ್ಕಾರ. ದೇಶದ ಇತಿಹಾಸ ಗಮನಿಸಿದರೆ, ಚುನಾವಣೆ ಫಲಿತಾಂಶದ ನಂತರವೇ ಪ್ರಧಾನಿಯ ಆಯ್ಕೆಯಾಗುತ್ತದೆ. ಬಿಜೆಪಿಯನ್ನು ವಿರೋಧಿಸುತ್ತಿರುವ ಎಲ್ಲಾ ಪಕ್ಷಗಳ ಮುಖಂಡರೂ, ಮೋದಿಗಿಂತ ಹೆಚ್ಚು ಸಮರ್ಥರು’ ಎಂದು ನಾಯ್ಡು ಹೇಳಿದ್ದರು.

ಈ ವಿಡಿಯೊ ಈಗ ಚರ್ಚೆಯಲ್ಲಿದೆ. 2024ರ ಚುನಾವಣೆ ಫಲಿತಾಂಶದ ನಂತರ ತಾವು ಎನ್‌ಡಿಎ ಜತೆಗೇ ಇರುವುದಾಗಿ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಈಗ ನಾಯ್ಡು ಅವರಿಗೆ ತಮ್ಮ ವಿಚಾರಧಾರೆ ಅಥವಾ ರಾಜಕೀಯ ಒತ್ತಡ ಯಾವುದು ಮುಖ್ಯ ಎಂಬುದನ್ನು ಕಾದುನೋಡಬೇಕಿದೆ ಎಂದೆನ್ನುತ್ತಿದ್ದಾರೆ ನೆಟ್ಟಿಗರು.

ಆಂಧ್ರಪ್ರದೇಶದಲ್ಲಿ ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಈ ಬಾರಿ ಪುಟಿದೆದ್ದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಜತೆಗೆ ಲೋಕಸಭಾ ಚುನಾವಣೆಯಲ್ಲೂ ಗಮನಸೆಳೆದಿದೆ. ದೇಶದ ರಾಜಕೀಯದ ಮಹಾ ಸಮರದಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ.

543 ಸದಸ್ಯ ಬಲದ ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಜೂನ್‌ 4 (ಮಂಗಳವಾರ) ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 291 ಸ್ಥಾನಗಳನ್ನು ಹಾಗೂ 'ಇಂಡಿಯಾ' ಮೈತ್ರಿಕೂಟ 234 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಸರ್ಕಾರ ರಚಿಸುವ ಸಂಬಂಧ ಎನ್‌ಡಿಎ ಹಾಗೂ ಇಂಡಿಯಾ ನಾಯಕರು ಇಂದು ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.