ಹೈದರಾಬಾದ್: ನೆರೆಯ ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಜಯಭೇರಿ ಬಾರಿಸಿದೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ತೆಲುಗುದೇಶಂ ಪಕ್ಷ 133 ಸ್ಥಾನ ಗೆದ್ದಿದ್ದು, ಸ್ಪಷ್ಟಬಹುಮತ ಪಡೆದಿದೆ.
ತೆಲುಗುದೇಶಂ ಹಾಗೂ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಮೈತ್ರಿಕೂಟ ಒಟ್ಟು 162 ಸ್ಥಾನವನ್ನು ಗೆದ್ದುಕೊಂಡಿವೆ.
ಕಳೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದ್ದ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರಿಗೆ ಈ ಬಾರಿ ತೀವ್ರ ಮುಖಭಂಗವಾಗಿದೆ. ವೈಎಸ್‌ಆರ್‌ಸಿಪಿ ಈ ಬಾರಿ 10 ಸ್ಥಾನವಷ್ಟೇ ಗೆದ್ದಿದೆ.
144 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 18 ಲೋಕಸಭಾ ಕ್ಷೇತ್ರಗಳಲ್ಲಿ ಟಿಡಿಪಿ ಸ್ಪರ್ಧಿಸಿದರೆ, ಬಿಜೆಪಿ 10 ವಿಧಾನಸಭಾ ಮತ್ತು 6 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜನಸೇನಾ ಪಕ್ಷವು 21 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದರೂ ಸೋತಿದ್ದು ಅರ್ಥವಾಗುತ್ತಿಲ್ಲ: ಜಗನ್
ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸವಾಲುಗಳನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಗೆದ್ದ ಪಕ್ಷಕ್ಕೆ ಶುಭಹಾರೈಸುತ್ತೇನೆ. ವೈಎಸ್ಆರ್ ಕಾಂಗ್ರೆಸ್ ಪಕ್ಷವು ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.
4 ಲಕ್ಷ ಮತಗಳ ಅಂತರದಲ್ಲಿ ಶರ್ಮಿಳಾಗೆ ಹಿನ್ನಡೆ
ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ಅವರು ಕಡಪ ಕ್ಷೇತ್ರದಿಂದ 4,02,245 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ. ಅವರ ಸೋದರ ಸಂಬಂಧಿ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿ ವೈ.ಎಸ್. ಅವಿನಾಶ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.
ನಾಯ್ಡು ಭೇಟಿಯಾದ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದ್ದು, ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.