ADVERTISEMENT

ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಹತ್ಯೆ ಪ್ರಕರಣ: ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧ

ಪಿಟಿಐ
Published 19 ಏಪ್ರಿಲ್ 2024, 9:46 IST
Last Updated 19 ಏಪ್ರಿಲ್ 2024, 9:46 IST
<div class="paragraphs"><p>ವೈ.ಎಸ್‌. ವಿವೇಕಾನಂದ ರೆಡ್ಡಿ</p></div>

ವೈ.ಎಸ್‌. ವಿವೇಕಾನಂದ ರೆಡ್ಡಿ

   

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್‌. ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣ ಸಂಬಂಧ ಚುನಾವಣಾ ಪ್ರಚಾರದ ವೇಳೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ರಾಜಕೀಯ ಪಕ್ಷಗಳಿಗೆ ಕಡಪ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣ ಸಂಬಂಧ ಸ್ಥಳೀಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕಡಪ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಜಿ. ಶ್ರೀದೇವಿ ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ADVERTISEMENT

ಆಂಧ್ರಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ, ಅವರ ಸೋದರ ಸಂಬಂಧಿ ಸುನಿತಾ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಡಿ. ಪುರಂದೇಶ್ವರಿ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಬಾರಿ ಕಡಪ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಪುತ್ರಿ ಹಾಗೂ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರ ಸಹೋದರಿ ವೈ.ಎಸ್‌. ಶರ್ಮಿಳಾ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯೂ ಆಗಿರುವ ಶರ್ಮಿಳಾ ಅವರು, ಚಿಕ್ಕಪ್ಪ ವೈ.ಎಸ್‌. ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಹಾಗೂ ವೈಎಸ್‌ಆರ್‌ಸಿಪಿ ಅಭ್ಯರ್ಥಿ ವೈ.ಎಸ್‌.ಅವಿನಾಶ್‌ ರೆಡ್ಡಿ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟು ಅಖಾಡಕ್ಕಿಳಿದಿದ್ದಾರೆ.

2019ರ ಮಾರ್ಚ್‌ನಲ್ಲಿ ಮಾಜಿ ಸಿಎಂ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸಹೋದರ ವಿವೇಕಾನಂದ ರೆಡ್ಡಿ ಅವರ ಮೃತದೇಹವು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿರುವ ನಿವಾಸದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆಂಧ್ರಪ್ರದೇಶದಲ್ಲಿ ಮೇ 13ರಂದು ಏಕಕಾಲಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.