ADVERTISEMENT

7 ಮತಗಟ್ಟೆಗಳಲ್ಲಿ EVM ಧ್ವಂಸಗೊಳಿಸಿದ YSRCP ಶಾಸಕನ ವಿರುದ್ಧ ಕ್ರಮಕ್ಕೆ EC ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2024, 2:14 IST
Last Updated 22 ಮೇ 2024, 2:14 IST
   

ಪಲ್ನಾಡು (ಆಂಧ್ರ ಪ್ರದೇಶ): ವೈಎಸ್‌ಆರ್‌ಸಿಪಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಅವರು ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು, ರಾಮಕೃಷ್ಣ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.

ರಾಮಕೃಷ್ಣ ರೆಡ್ಡಿ ಅವರು ‌ಪಲ್ನಾಡು ಜಿಲ್ಲೆಯ ಮಚರ್ಲಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 202 ಸೇರಿದಂತೆ 7 ಮತಗಟ್ಟೆಗಳಲ್ಲಿ ಇವಿಎಂಗಳನ್ನು ಧ್ವಂಸಗೊಳಿಸಿರುವ ದೃಶ್ಯಗಳು ವೆಬ್ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಘಟನೆ ಕುರಿತ ವಿಡಿಯೊಗಳನ್ನು ಚುನಾವಣಾ ಆಯೋಗವು ಪೊಲೀಸರಿಗೆ ಹಸ್ತಾಂತರಿಸಿದ್ದು, ತನಿಖೆ ನಡೆಸುವಂತೆ ಸೂಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಗೆ ಸಂಬಂಧಿಸಿ ರಾಮಕೃಷ್ಣ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತ ಪಕ್ಷದ ಶಾಸಕರು ಚುನಾವಣೆಯಲ್ಲಿ ಸೋಲಿನ ಭಯದಿಂದ ಇವಿಎಂಗಳಿಗೆ ಹಾನಿಗೊಳಿಸಿದ್ದಾರೆ’ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ನಾರಾ ಲೋಕೇಶ್ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನದ ವೇಳೆ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಂತದಲ್ಲಿ 96 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶೇಕಡ 62.84ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಆಂಧ್ರಪ್ರದೇಶದಲ್ಲಿನ ಚುನಾವಣಾ ಹಿಂಸಾಚಾರಕ್ಕೆ ಕಾರಣ ಯಾರು ಎಂಬ ವಿಚಾರವಾಗಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ಆರೋಪ–ಪ್ರತ್ಯಾರೋಪ ನಡೆದಿತ್ತು. ಪಲ್ನಾಡು, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು, ಕೆಲವೆಡೆ ಇವಿಎಂಗಳಿಗೂ ಹಾನಿಗೊಳಿಸಲಾಗಿತ್ತು. ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.