ಕೋಲ್ಕತ್ತ: ‘ಗೋವಾಕ್ಕೆ ಹೋದರೆ ತಾನು ಗೋವಾದ ಮಗಳು, ತ್ರಿಪುರಾಕ್ಕೆ ಭೇಟಿ ನೀಡಿದರೆ ನಾನು ತ್ರಿಪುರಾದ ಮಗಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳಕ್ಕೆ ತನ್ನದೇ ಆದ ಮಗಳ ಅಗತ್ಯವಿದೆ’ ಎಂಬ ಬಿಜೆಪಿ ಮುಖಂಡ ಹಾಗೂ ಸಂಸದ ದಿಲೀಪ್ ಘೋಷ್ ಅವರ ಹೇಳಿಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ದಿಲೀಪ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್ ಮುಖಂಡರು, ‘ಮಹಿಳೆಯರ ವಿರುದ್ಧ ಹೇಳಿಕೆ ನೀಡುವುದು ಕೇಸರಿ ಪಡೆಯ ಡಿಎನ್‌ಎದಲ್ಲೇ ಇದೆ’ ಎಂದು ಆರೋಪಿಸಿದ್ದಾರೆ. ಜತೆಗೆ ಘೋಷ್ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಿಜೆಪಿಯ ಘೋಷ್ ಅವರು ಪ್ರಸಕ್ತ ಚುನಾವಣೆಯಲ್ಲಿ ಬರ್ಧಾಮನ್–ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ಅವರು ಮೇದಿನಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು.
‘ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿ ವಿರುದ್ಧ ವೈಯಕ್ತಿ ದಾಳಿ ಅಥವಾ ನಿಂದನೆ ಮಾಡುವ ಹೇಳಿಕೆಯನ್ನು ನೀಡಬಾರದು ಎಂದು ಮಾದರಿ ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಘೋಷ್ ಅವರ ಹೇಳಿಕೆಯು ಎಲ್ಲಾ ಮಿತಿಗಳನ್ನೂ ಮೀರಿದೆ. ಅಧಿಕಾರದಲ್ಲಿರುವ ಮಹಿಳೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಾಂಜಾ ಅವರು ಘೋಷ್ ಕ್ಷಮೆಗೆ ಆಗ್ರಹಿಸಿದ್ದಾರೆ.
’ಮನುಷ್ಯರೇ ಆಗಿರಲಿ ಅಥವಾ ಹಿಂದೂ ದೇವತೆಯರೇ ಆಗಿರಲಿ ಘೋಷ್‌ಗೆ ಮಹಿಳೆಯರ ಕುರಿತು ಕಿಂಚಿತ್ತೂ ಗೌರವವಿಲ್ಲ’ ಎಂದು ಶಶಿ ಆರೋಪಿಸಿದ್ದಾರೆ.
2021ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಬಂಗಾಳದ ಹೆಮ್ಮೆ’ ಎಂಬ ಘೋಷಣೆಯನ್ನು ಟಿಎಂಸಿ ಪರಿಚಯಿಸಿತ್ತು. ಜತೆಗೆ ಬಂಗಾಳಕ್ಕೆ ತನ್ನ ಮಗಳು ಬೇಕಿದೆ ಎಂದೂ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.