ಭುವನೇಶ್ವರ: ‘ಪಟ್ನಾಯಕ್ ಅವರಿಗೆ ವಯಸ್ಸಾಗಿದೆ, ಆರೋಗ್ಯವೂ ಸರಿಯಿಲ್ಲ. ಆದ್ದರಿಂದ, ಅವರಿಗೆ ವಿಶ್ರಾಂತಿ ನೀಡಬೇಕು’ ಎಂದಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶುಕ್ರವಾರ ತಿರುಗೇಟು ನೀಡಿದರು.
‘ಜನರ ಕುರಿತು ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆ. ನನ್ನ ಆರೋಗ್ಯವು ಚೆನ್ನಾಗಿಯೇ ಇದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗಾಗಿ ನಾನು ಹಲವು ತಿಂಗಳುಗಳಿಂದ ಪ್ರಚಾರ ನಡೆಸುತ್ತಿದ್ದೇನೆ’ ಎಂದು 77 ವರ್ಷದ ಪಟ್ನಾಯಕ್ ಹೇಳಿದರು.
‘ವಿಡಿಯೊ ಸಂದೇಶಗಳಲ್ಲಿ ಪಟ್ನಾಯಕ್ ಅವರು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ’ ಎಂದೂ ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ‘ಬಿಜೆಪಿ ನಾಯಕರು ತುಸು ತಮ್ಮ ಸ್ವಂತ ಬುದ್ಧಿಯನ್ನೂ ಬಳಸಬೇಕು’ ಎಂದರು.
‘ಜನಪ್ರಿಯ ಮುಖ್ಯಮಂತ್ರಿಯೊಬ್ಬರನ್ನು ಹೀಗೆ ನಿಂದಿಸುವುದರಿಂದ ನಮಗೇ ಲಾಭವಾಗಲಿದೆ. ಮತ ಗಳಿಸಲು ಶ್ರೇಷ್ಠ ನಾಯಕರ ಕುರಿತು ಅಶ್ಲೀಲ ಎನಿಸುವ ಮಾತನಾಡಬಾರದು. ಇತಿಹಾಸವು ಅವರನ್ನು ಎಂದೂ ಕ್ಷಮಿಸುವುದಿಲ್ಲ’ ಎಂದು ಬಿಜೆಡಿ ನಾಯಕ, ಪಟ್ನಾಯಕ್ ಅವರ ಆಪ್ತ ವಿ.ಕೆ. ಪಾಂಡ್ಯನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.