ADVERTISEMENT

LS polls: ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ ಅಕ್ಷಯ್ ಕುಮಾರ್, ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮೇ 2024, 4:14 IST
Last Updated 20 ಮೇ 2024, 4:14 IST
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್   

ನವದೆಹಲಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು (ಸೋಮವಾರ) ಆರಂಭಗೊಂಡಿದ್ದು, ರಾಜಕೀಯ ಮುಖಂಡರು ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈನ ಮತಗಟ್ಟೆವೊಂದರಲ್ಲಿ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪ್ರಜೆಯಾಗಿ ಮೊದಲ ಮತ ಚಲಾಯಿಸಿದ್ದಾರೆ. ಅಕ್ಷಯ್ ಕುಮಾರ್ ಅವರು 2023ರಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದರು. ಇದಕ್ಕೂ ಮುನ್ನ ಅವರು ಕೆನಡಾದ ಪ್ರಜೆಯಾಗಿದ್ದರು.

ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಭಾರತವು ಅಭಿವೃದ್ಧಿ ಅಭಿವೃದ್ಧಿಯಾಗಬೇಕು ಮತ್ತು ಸದೃಢವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಜನರು ತಮಗೆ ಯಾರು ಸರಿಯಾದ ಅಭ್ಯರ್ಥಿ ಅಥವಾ ನಾಯಕ ಎನಿಸಿದರೆ ಅಂತವರಿಗೆ ಮತ ಹಾಕುವಂತೆ ಮನವಿ ಮಾಡುತ್ತೇನೆ. ಅದೇ ರೀತಿ ಮತದಾನ ಪ್ರಮಾಣವು ಉತ್ತಮವಾಗಿರುತ್ತದೆ ಎಂದು ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

2023ರ ಸ್ವಾತಂತ್ರ್ಯ ದಿನಾಚರಣೆಯಂದು ಅಕ್ಷಯ್ ಕುಮಾರ್ ಅವರು ನಾನು ಮತ್ತೆ ಭಾರತೀಯ ಪೌರತ್ವವನ್ನು ಪಡೆದುಕೊಂಡಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು. ಜತೆಗೆ, ‘ನಾನು ಭಾರತೀಯ ಪ್ರಜೆ ಆಗಿದ್ದೇನೆ’ ಎಂದು ಹೇಳುವ ಮೂಲಕ ಪೌರತ್ವ ಪ್ರಮಾಣಪತ್ರವನ್ನು ಹಂಚಿಕೊಂಡಿದ್ದರು.

‘ಹೃದಯ ಮತ್ತು ಪೌರತ್ವ, ಈಗ ಎರಡೂ ಭಾರತೀಯ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಜೈ ಹಿಂದ್’ ಎಂದು 56 ವರ್ಷ ವಯಸ್ಸಿನ ಅಕ್ಷಯ್ ಕುಮಾರ್ ಸಂತಸ ಹಂಚಿಕೊಂಡಿದ್ದರು.

1990ರ ದಶಕದಲ್ಲಿ ನನ್ನ 15 ಚಿತ್ರಗಳು ಸತತವಾಗಿ ವಿಫಲವಾಗಿದ್ದವು. ವೃತ್ತಿ ಬದುಕಿನಲ್ಲಿ ಪ್ರಗತಿ ಇರಲಿಲ್ಲ. ಇದರಿಂದ ನೊಂದು ನಾನು ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಅಕ್ಷಯ್‌ ಕುಮಾರ್ ಆಗ ಕಾರಣ ನೀಡಿದ್ದರು. 2019ರಲ್ಲಿ ಚುನಾವಣೆಗೆ ಮೊದಲು ಪ್ರಧಾನಿ ಮೋದಿ ಅವರೊಂದಿಗೆ ರಾಜಕೀಯಯೇತರ ಸಂದರ್ಶನ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ. ಇದು, ಚರ್ಚೆಗೆ ಗ್ರಾಸವಾಗಿತ್ತು. ಆಗ, ನಾನು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದರು.

ಇಂದು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ರಾಯ್‌ಬರೇಲಿ, ಅಮೇಠಿ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಬಿಜೆಪಿಯ ಸ್ಮೃತಿ ಇರಾನಿ (ಅಮೇಠಿ), ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್ (ಲಖನೌ) ಮತ್ತು ಪೀಯೂಷ್‌ ಗೋಯಲ್ (ಮುಂಬೈ ಉತ್ತರ), ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಹಾಗೂ ಆರ್‌ಜೆಡಿಯ ರೋಹಿಣಿ ಆಚಾರ್ಯ (ಸಾರಣ್) ಅವರು ಕಣದಲ್ಲಿದ್ದಾರೆ.

ಐದನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯುತ್ತಿದೆ. ಲೋಕಸಭಾ ಚುನಾವಣೆ ಜತೆಯಲ್ಲೇ ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದ್ದು, ಬಿಜೆಡಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕಣದಲ್ಲಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ಮುಂಬೈನಲ್ಲಿ ನಟ ಫರ್ಹಾನ್ ಅಖ್ತರ್, ನಿರ್ದೇಶಕಿ ಜೋಯಾ ಅಖ್ತರ್‌, ನಟಿ ಜಾಹ್ನವಿ ಕಪೂರ್, ಟಬು, ಸ್ವಾನಂದ್‌ ಕಿರ್ಕಿರೆ ಸೇರಿದಂತೆ ಹಲವು ಗಣ್ಯರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.