ನವದೆಹಲಿ: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಇಂದು (ಬುಧವಾರ) ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಇತರ ಮುಖಂಡರ ಸಮ್ಮುಖದಲ್ಲಿ ವಿಜೇಂದರ್ ಪಕ್ಷಕ್ಕೆ ಸೇರ್ಪಡೆಗೊಂಡರು.
‘ದೇಶದ ಅಭಿವೃದ್ಧಿ ಮತ್ತು ಜನರ ಸೇವೆಗಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ’ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.
38 ವರ್ಷದ ವಿಜೇಂದರ್ ಸಿಂಗ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಬಳಿಕ 2009ರ ವಿಶ್ವ ಚಾಂಪಿಯನ್‌ಶಿಪ್ ಮತ್ತು 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದರು. 2010ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ವಿಜೇಂದರ್ ಸಿಂಗ್ ಅವರು ದಕ್ಷಿಣ ದೆಹಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಜಾಟ್ ಸಮುದಾಯಕ್ಕೆ ಸೇರಿದ ವಿಜೇಂದರ್ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ನಡೆದಿದ್ದ ರೈತರ ಮತ್ತು ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ವಿಜೇಂದರ್ ಈ ಹಿಂದೆ ಬಿಜೆಪಿಯನ್ನು ಟೀಕಿಸಿದ್ದರು.
ಒಡಿಶಾ: ಬಿಜೆಪಿ ಉಪಾಧ್ಯಕ್ಷ ಬಿಜೆಡಿಗೆ
(ಭುವನೇಶ್ವರ ವರದಿ): ಒಡಿಶಾದ ಬಿಜೆಪಿ ಉಪಾಧ್ಯಕ್ಷ ಭೃಗು ಬಕ್ಷಿ ಪಾತ್ರಾ ಅವರು ಪಕ್ಷ ತೊರೆದು ಬುಧ ಬಿಜೆಡಿಗೆ ಬುಧವಾರ ಸೇರಿದರು.
ಭೃಗು ಅವರನ್ನು ಬಿಜೆಡಿಯು ಬರ್ಹಾಂಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಇವರು ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಬಿಜೆಡಿಯ ಬರ್ಹಾಂಪುರ ಸಂಸದ ಚಂದ್ರಶೇಖರ್ ಸಾಹು ಅವರು ಭೃಗು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಸಂಸದ ಯುಬಿಟಿಗೆ: (ಮುಂಬೈ ವರದಿ): ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದರಿಂದ ಮಹಾರಾಷ್ಟ್ರದ ಜಲಗಾಂವ್ ಕ್ಷೇತ್ರದ ಸಂಸದ ಉನ್ಮೇಶ್ ಪಾಟೀಲ್ ಅವರು ಪಕ್ಷ ತೊರೆದು, ಶಿವಸೇನಾ (ಯುಬಿಟಿ) ಸೇರ್ಪಡೆಗೊಂಡರು.
ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಉನ್ಮೇಶ್ ಅವರು ಬೆಂಬಲಿಗರ ಜೊತೆಗೆ ಶಿವಸೇನಾ ಸೇರಿದರು.
ಬಿಜೆಪಿ ಸೇರಿದ ಎಸ್.ಪಿ. ಸಿಂಗ್: (ಡೆಹ್ರಾಡೂನ್ ವರದಿ): ಉತ್ತರಾಖಂಡ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಎಸ್.ಪಿ. ಸಿಂಗ್ ಎಂಜಿನಿಯರ್ ಅವರು ಬೆಂಬಲಿಗರೊಂದಿಗೆ ಬುಧವಾರ ಬಿಜೆಪಿಗೆ ಸೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.