ADVERTISEMENT

ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷವಾಗಿ ಉಳಿಯಲು ನಿರ್ಧರಿಸಿದೆ: ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2024, 8:55 IST
Last Updated 9 ಜೂನ್ 2024, 8:55 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷವಾಗಿ ಉಳಿಯಲು ನಿರ್ಧರಿಸಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಕಾಂಗ್ರೆಸ್ ಪ್ರತಿಪಕ್ಷವಾಗಿ ಉಳಿಯಲು ನಿರ್ಧರಿಸಿದ್ದು, ಎಂದಿನಂತೆ ಜನರ ಪರವಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಜೂನ್‌ 4 (ಮಂಗಳವಾರ) ಫಲಿತಾಂಶ ಹೊರಬಿದ್ದಿದೆ. 543 ಸದಸ್ಯ ಬಲದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 291 ಸ್ಥಾನಗಳನ್ನು ಹಾಗೂ 'ಇಂಡಿಯಾ' ಮೈತ್ರಿಕೂಟ 234 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಈ ಬಾರಿ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಯಶ ಸಾಧಿಸದಿದ್ದರೂ ಭಾರತೀಯ ಜನತಾ ಪಕ್ಷ (ಬಿಜೆಪಿ) 240 ಸ್ಥಾನಗಳಲ್ಲಿ ಗೆಲುವಿನೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಬಾರಿಗಿಂತಲೂ ಗಮನಾರ್ಹ ಸಾಧನೆ ಮಾಡಿರುವ ಕಾಂಗ್ರೆಸ್, 99 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ರಾಷ್ಟ್ರಪತಿ ಭವನದಲ್ಲಿ ಇಂದು (ಭಾನುವಾರ) ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ತೆಲುಗು ದೇಶಂ ಪಕ್ಷವು 16 ಹಾಗೂ ಜೆಡಿಯು 12 ಸ್ಥಾನಗಳಲ್ಲಿ ಗೆದ್ದು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮಿವೆ. ಟಿಡಿಪಿ ಹಾಗೂ ಜೆಡಿಯುಗೆ ತಲಾ ಒಂದು ಸಂಪುಟ ದರ್ಜೆ ಸೇರಿದಂತೆ ತಲಾ ಮೂರು ಖಾತೆಗಳನ್ನು ನೀಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ಶಿವಸೇನೆಯು (ಏಕನಾಥ ಶಿಂದೆ ಬಣ) ಏಳು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪಕ್ಷಕ್ಕೆ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ ನೀಡುವ ಸಾಧ್ಯತೆ ಇದೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಸಹ ಎರಡು ಖಾತೆಗಳನ್ನು ಪಡೆಯಲಿದೆ. ಜೆಡಿಎಸ್‌, ಅಪ್ನಾ ದಳ, ಆರ್‌ಎಲ್‌ಡಿ, ಎಚ್‌ಎಎಂ, ಜನಸೇನಾ ಪಕ್ಷಗಳಿಗೆ ತಲಾ ಒಂದು ಖಾತೆ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.