ADVERTISEMENT

'ಮೋದಿ ಪರಿವಾರ, ಮೋದಿ ಗ್ಯಾರಂಟಿ' ಜಾಹೀರಾತು: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಪಿಟಿಐ
Published 21 ಮಾರ್ಚ್ 2024, 14:17 IST
Last Updated 21 ಮಾರ್ಚ್ 2024, 14:17 IST
<div class="paragraphs"><p>ನರೇಂದ್ರ ಮೋದಿ ಹಾಗೂ ಕಾಂಗ್ರೆಸ್</p></div>

ನರೇಂದ್ರ ಮೋದಿ ಹಾಗೂ ಕಾಂಗ್ರೆಸ್

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯು ಸರ್ಕಾರದ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ಗುರುವಾರ ದೂರು ನೀಡಿದ್ದು, 'ಮೋದಿ ಪರಿವಾರ', 'ಮೋದಿ ಗ್ಯಾರಂಟಿ' ಜಾಹೀರಾತುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದೆ.

ಮುಕುಲ್‌ ವಾಸ್ನಿಕ್‌, ಸಲ್ಮಾನ್‌ ಖುರ್ಷಿದ್‌ ಹಾಗೂ ಸುಪ್ರೀಯಾ ಶ್ರೀನಾಥೆ ಅವರನ್ನೊಳಗೊಂಡ ಕಾಂಗ್ರೆಸ್‌ ನಿಯೋಗ ಚುನಾವಣಾ ಆಯೋಗವನ್ನು ಗುರುವಾರ ಭೇಟಿ ಮಾಡಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಹಲವು ದೂರುಗಳನ್ನು ಸಲ್ಲಿಸಿದೆ.

ADVERTISEMENT

ಯುಪಿಎ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ 2ಜಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಸುಳ್ಳು ಜಾಹೀರಾತುಗಳನ್ನು ನೀಡಿ ಜನರನ್ನು ಪ್ರಚೋದಿಸುತ್ತಿದೆ. ವಿಸ್ತೃತವಾದ ನ್ಯಾಯಾಂಗ ಪ್ರಕ್ರಿಯೆಯಿಂದಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿರುವ ದಶಕದ ಹಿಂದಿನ ಕಥನವನ್ನು ಮುನ್ನಲೆಗೆ ತರಲು ಪ್ರಯತ್ನಿಸುತ್ತಿದೆ ಎಂದು ದೂರಿದೆ.

ಈ ವಿಚಾರವಾಗಿ ನೀಡಲಾಗುತ್ತಿರುವ ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸಿ, ಇಂತಹವುಗಳನ್ನು ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

'ಮೋದಿ ಪರಿವಾರ' ಜಾಹೀರಾತಿನಲ್ಲಿ ಸರ್ಕಾರದ ಸಂಪನ್ಮೂಲಗಳ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ಮತ್ತೊಂದು ದೂರು ಸಲ್ಲಿಸಿರುವ ಕಾಂಗ್ರೆಸ್‌, 'ಸೇನಾ ಪಡೆಗಳನ್ನು ಜಾಹೀರಾತಿನಲ್ಲಿ ಬಳಸಿಕೊಂಡಿರುವುದು ನಾಚಿಕೆಗೇಡು. ಇದು ಚುನಾವಣಾ ಆಯೋಗದ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಜಾಹೀರಾತುಗಳನ್ನು ತಯಾರಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಒತ್ತಾಯಿಸುತ್ತಿರುವುದನ್ನೂ ಇಲ್ಲಿ ಗಮನಿಸಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದೆ.

ದೆಹಲಿ ಮೆಟ್ರೊದಲ್ಲಿರುವ ಬಿಜೆಪಿಯ 'ಮೋದಿ ಗ್ಯಾರಂಟಿ' ಅಡಿಬರಹದ ಜಾಹೀರಾತು ವಿರುದ್ಧವೂ ದೂರು ನೀಡಲಾಗಿದೆ. ಹಾಗೆಯೇ, ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಮತ್ತು ಕಾನೂನು ಪಾಲನೆಯ ಸಲುವಾಗಿ, ಪ್ರಧಾನಿ ಮೋದಿ ಅವರ ಚಿತ್ರವನ್ನು ಸರ್ಕಾರದ ಎಲ್ಲ ಸಂಸ್ಥೆಗಳು, ಕಚೇರಿಗಳು, ಪೆಟ್ರೋಲ್‌ ಬಂಕ್‌ಗಳಿಂದ ತೆಗೆದುಹಾಕಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.