ADVERTISEMENT

ಚುನಾವಾಣಾ ಬಾಂಡ್‌ ವಿಷಯದಲ್ಲಿ ‍ಪ್ರಧಾನಿ ಹೇಳಿಕೆ ಸುಳ್ಳು: ಜೈರಾಮ್

ಪಿಟಿಐ
Published 1 ಏಪ್ರಿಲ್ 2024, 14:52 IST
Last Updated 1 ಏಪ್ರಿಲ್ 2024, 14:52 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಚುನಾವಾಣಾ ಬಾಂಡ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಸೋಮವಾರ ತೀವ್ರ ಟೀಕೆ ವ್ಯಕ್ತಪಡಿಸಿದೆ.

‘ಮೋದಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಇಡೀ ದೇಶಕ್ಕೆ ತಿಳಿದಿದೆ. ಆದರೆ, ಇದನ್ನು ಸಾಬೀತುಮಾಡಲು ಸರಿಯಾದ ಸಾಕ್ಷಿ ಸಿಗುತ್ತಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಹೇಳಿದ್ದಾರೆ.

ಮೋದಿ ಅವರು ‘ತಂತಿ’ ಸುದ್ದಿವಾಹಿನಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ, ಚುನಾವಣಾ ಬಾಂಡ್‌ ವಿವಾದದಿಂದಾಗಿ ತಮ್ಮ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ತಳ್ಳಿಹಾಕಿದ್ದು, ‘ಯಾವುದೇ ವ್ಯವಸ್ಥೆಯೂ ಪರಿಪೂರ್ಣವಲ್ಲ ಅಥವಾ ಕೊರತೆಗಳಿಲ್ಲದೇ ಇಲ್ಲ. ಆದರೆ, ಆ ವ್ಯವಸ್ಥೆಯಲ್ಲಿರುವ ಕೊರತೆಯನ್ನು ನೀಗಿಸಬಹುದು’ ಎಂದು ತಿಳಿಸಿದ್ದರು.

ADVERTISEMENT

ಪ್ರಧಾನಿ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಜೈರಾಮ್‌ ಅವರು, ‘ಪ್ರತಿದಿನವೂ ಪ್ರಧಾನಿ ಮೋದಿ ಅವರ ಬೂಟಾಟಿಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅವರ ಅಪ್ರಾಮಾಣಿಕತೆಯೂ ಅಧಿಕವಾಗುತ್ತಿದೆ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ಈ ಚುನಾವಣಾ ಬಾಂಡ್‌ ಯೋಜನೆಯಲ್ಲಿ ಬಾಂಡ್‌ ನೀಡಿದವರ ಹೆಸರನ್ನು ಗುಟ್ಟಾಗಿ ಇಡಲಾಗಿತ್ತು . ಯಾವ ಮೂಲಗಳಿಂದ ಪಕ್ಷಕ್ಕೆ ಹಣ ಬಂದಿದೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಂದ ಮುಚ್ಚಿಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು ಎನ್ನುವುದೇ ಇದರ ಅರ್ಥ’ ಎಂದು ಜೈರಾಮ್‌ ಕಿಡಿಕಾರಿದ್ದಾರೆ.

‘2018ರಿಂದ 2024ರವರೆಗೆ ಯಾವ ದೇಣಿಗೆದಾರನಿಂದ ಯಾವ ಪಕ್ಷಕ್ಕೆ ಎಷ್ಟು ಹಣ ಬಂದಿದೆ ಎಂಬ ಒಂದೇ ಒಂದು ಮಾಹಿತಿ ಸಾರ್ವಜನಿಕರ ಮುಂದೆ ಬಹಿರಂಗವಾಗಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.