ಉತ್ತರಪ್ರದೇಶ: ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ದೇಶದಲ್ಲಿ ಷರಿಯತ್ ಕಾನೂನನ್ನು ಮರು ಜಾರಿ ಮಾಡುವ ಮತ್ತು ದೇಶದ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಅಮರೋಹಾದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಅದರ ಒಕ್ಕೂಟ ದೇಶಕ್ಕೆ ದ್ರೋಹ ಬಗೆದಿದೆ, ಮತ್ತೊಮ್ಮೆ ಪೊಳ್ಳು ಪ್ರಣಾಳಿಕೆಯೊಂದಿಗೆ ನಿಮ್ಮೆದುರು ಬಂದಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೋಡಿ, ಸರ್ಕಾರವನ್ನು ರಚಿಸಿದರೆ ಷರಿಯತ್ ಕಾನೂನನ್ನು ಜಾರಿಗೊಳಿಸವುದಾಗಿ ಹೇಳಿದೆ. ಈಗ ನೀವೇ ಹೇಳಿ, ಅಂಬೇಡ್ಕರ್ ರಚಿಸಿದ ಸಂವಿಧಾನದಂತೆ ದೇಶವು ಸಾಗಬೇಕೋ ಅಥವಾ ಷರಿಯತ್ ಕಾನೂನನ್ನು ಪಾಲಿಸಬೇಕೋ ಎಂದರು.
ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಪ್ರಧಾನಿ ಮೋದಿಯವರು ತ್ರಿವಳಿ ತಲಾಖ್ ಅನ್ನು ನಿಷೇಧಿಸಿದಕ್ಕೇ ಪ್ರತಿಯಾಗಿ ಕಾಂಗ್ರೆಸ್ ಷರಿಯತ್ ಕಾನೂನು ಜಾರಿಗೆ ಮುಂದಾಗಿದೆ ಎಂದು ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ವಾಗ್ದಾಳಿ ನಡೆಸಿದರು.
ಜನರ ಆಸ್ತಿಯನ್ನು ಪಡೆದು ಮತ್ತೆ ಅವರಿಗೇ ಹಂಚುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಅಂದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಿಮ್ಮದೇ ಆಸ್ತಿಯನ್ನು ಲೂಟಿ ಮಾಡಲು ಬಿಡುತ್ತೀರಾ?. ಈ ನಾಚಿಕೆಯಿಲ್ಲದವರ ಸ್ಥಿತಿ ನೋಡಿ. ಒಂದೆಡೆ ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟರೆ ಮತ್ತೊಂದೆಡೆ ಮಾಫಿಯಾ, ಕ್ರಿಮಿನಲ್‌ಗಳ ನಂಟಿನ ಜತೆ ಅವರ ಹೆಸರಿನಲ್ಲಿ ಫತಿಹಾ ಪಠಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.