ADVERTISEMENT

J&K: ಕಾಂಗ್ರೆಸ್‌ಗೆ ಮರಳಿದ ಮಾಜಿ ಮಂತ್ರಿ ಲಾಲ್ ಸಿಂಗ್: ಕಾರ್ಯಕರ್ತರ ಸಂಭ್ರಮ

ಪಿಟಿಐ
Published 20 ಮಾರ್ಚ್ 2024, 13:40 IST
Last Updated 20 ಮಾರ್ಚ್ 2024, 13:40 IST
<div class="paragraphs"><p>ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ ನಂತರ ಲಾಲ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದರು. ಪವನ್‌ ಖೇರಾ ಇದ್ದಾರೆ.</p></div>

ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ ನಂತರ ಲಾಲ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದರು. ಪವನ್‌ ಖೇರಾ ಇದ್ದಾರೆ.

   

ಪಿಟಿಐ ಚಿತ್ರ

ಜಮ್ಮು: ಡೋಗ್ರಾ ಸ್ವಾಭಿಮಾನ್ ಸಂಘಟನ್ ಪಾರ್ಟಿ ಮುಖ್ಯಸ್ಥರೂ ಆದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ADVERTISEMENT

ಕತುವಾ ಜಿಲ್ಲೆಗೆ ಸೇರಿದ 65 ವರ್ಷದ ಸಿಂಗ್ ಅವರು ದೆಹಲಿಯಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಉಧಮಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಚಿವ, ಬಿಜೆಪಿಯ ಜಿತೇಂದ್ರ ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರಕ್ಕೆ ಏ. 19ರಂದು ಮತದಾನ ನಡೆಯಲಿದೆ.

ಸಿಂಗ್ ಅವರು ಪಕ್ಷಕ್ಕೆ ಮರಳಿದ್ದಕ್ಕೆ ಹರ್ಷಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಉಧಮಪುರದ ಶಹೀದ್ ಚೌಕ್‌ ಬಳಿ ಇರುವ ಪಕ್ಷದ ಕಚೇರಿಯಲ್ಲಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಕಾಂಗ್ರೆಸ್ ಸೇರಿದ್ದರಿಂದಾಗಿ ಜಮ್ಮು–ಕಾಶ್ಮೀರದ ಉಧಮ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಸಾಧಿಸುವುದು ಸುಲಭವಾಗಲಿದೆ ಎಂದು ಪಕ್ಷದ ಕಾರ್ಯಕರ್ತರು ವಿಶ್ಲೇಷಿಸಿದ್ದಾರೆ.

‘ಶುದ್ಧ ಹಸ್ತರು ಹಾಗೂ ಜಾತ್ಯತೀತ ಮನೋಭಾವದ ಸಿಂಗ್ ಅವರು ಕಾಂಗ್ರೆಸ್‌ನೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿರುವುದರಿಂದ ಪಕ್ಷಕ್ಕೆ ಆನೆಬಲ ಸಿಕ್ಕಂತಾಗಿದೆ. ಸ್ವಯಂ ಪ್ರೇರಣೆಯಿಂದಲೇ ಸಿಂಗ್ ಅವರು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದಾರೆ. ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಮಣ ಭಲ್ಲಾ ಹೇಳಿದ್ದಾರೆ.

2004 ಮತ್ತು 2009ರಲ್ಲಿ ಉಧಮಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದಿದ್ದ ಲಾಲ್ ಸಿಂಗ್, 2014ರಲ್ಲಿ ಬಿಜೆಪಿ ಸೇರಿದ್ದರು. ಪಿಡಿಪಿ–ಬಿಜೆಪಿ ಮೈತ್ರಿ ರಚನೆಯ ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಮೈತ್ರಿಯು 2018ರಲ್ಲಿ ಮುರಿದುಬಿತ್ತು. ಇದಾದ ನಂತರ ಬಿಜೆಪಿ ತೊರೆದ ಸಿಂಗ್ ಅವರು, ಡಿಎಸ್‌ಎಸ್‌ಪಿ ಪಕ್ಷವನ್ನು ಹುಟ್ಟುಹಾಕಿದರು. 

2019ರಲ್ಲಿ ಉಧಮ್‌ಪುರ ಕ್ಷೇತ್ರದಿಂದ ಬಿಜೆಪಿಯ ಜಿತೇಂದ್ರ ಸಿಂಗ್‌ ಜಯಗಳಿಸಿದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಹಾರಾಜ ಹರಿ ಸಿಂಗ್ ಅವರ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ 3.53 ಲಕ್ಷ ಮತಗಳ ಅಂತರದಿಂದ ಅವರು ಪರಾಭವಗೊಂಡಿದ್ದರು. ಅದೇ ಚುನಾವಣೆಯಲ್ಲಿ ಲಾಲ್ ಸಿಂಗ್ ಅವರು 19 ಸಾವಿರ ಮತಗಳನ್ನು ಪಡೆದಿದ್ದರು.

2014ರಲ್ಲಿ ನಡೆದ ಚುನಾವಣೆಯಲ್ಲಿ ಜಿತೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್‌ನ ಗುಲಾಬ್‌ ನಬಿ ಆಜಾದ್ ಅವರು 60 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ತಮ್ಮ ಪತ್ನಿ ನಡೆಸುತ್ತಿರುವ ಶಿಕ್ಷಣ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 2023ರ ನ. 7ರಂದು ಇವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ನಂತರ ಜಾಮೀನು ಮೇಲೆ ಇವರ ಬಿಡುಗಡೆಯಾಗಿತ್ತು.

2011ರಲ್ಲಿ ನಡೆದ ಜಮೀನು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸಿಬಿಐ ಇವರನ್ನು ವಿಚಾರಣೆಗೊಳಪಡಿಸಿ, ಆರೋಪಪಟ್ಟಿ ಸಲ್ಲಿಸಿತ್ತು.

ಲಾಲ್ ಸಿಂಗ್ ಅವರ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಕ್ಷದ ಸಲ್ಮಾನ್ ನಿಝಾಮಿ, ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ. 

‘ಕಾಂಗ್ರೆಸ್‌ನ ಸಿದ್ಧಾಂತಗಳಿಗೆ ವಿರುದ್ಧವಾಗಿ ಲಾಲ್ ಸಿಂಗ್ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ನಾಚಿಕೆಯಾಗಬೇಕು. ಅತ್ಯಾಚಾರಿಯ ಬೆಂಬಲಿಗರನ್ನು ಸೇರಿಸಿಕೊಳ್ಳುವ ನಿರ್ಧಾರ ನಿಜಕ್ಕೂ ಶೋಚನೀಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.