ಜೈಪುರ: ‘ಒಂದು ಕಾಲದಲ್ಲಿ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಸ್ವತಂತ್ರವಾಗಿ 300 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಮಾಡಿರುವ ಪಾಪಕ್ಕೆ ದೇಶದ ಜನರೇ ಶಿಕ್ಷೆ ನೀಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು,‘ರಾಜಸ್ಥಾನದ ಅರ್ಧಭಾಗದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಶಿಕ್ಷೆ ನೀಡಿದ್ದಾರೆ. ರಾಜಸ್ಥಾನದಾದ್ಯಂತ ದೇಶಭಕ್ತಿಯಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನುವುದು ಜನರಿಗೆ ತಿಳಿದಿದೆ. 2014ಕ್ಕಿಂತ ಮೊದಲಿದ್ದ ಪರಿಸ್ಥಿತಿ ಮತ್ತೆ ಬರಲು ದೇಶದ ಜನರು ಬಿಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಗೆದ್ದಲುಗಳನ್ನು ಹರಡುವ ಮೂಲಕ ದೇಶವನ್ನು ಟೊಳ್ಳು ಮಾಡಿದೆ. ಪರಿಣಾಮ ದೇಶದ ಜನರು ಕಾಂಗ್ರೆಸ್ ಮೇಲೆ ಕೋಪಗೊಂಡಿದ್ದಾರೆ, ಅವರ ಪಾಪಗಳಿಗೆ ಶಿಕ್ಷೆ ನೀಡುತ್ತಿದ್ದಾರೆ’ ಎಂದು ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.