ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಧಾರ್ಮಿಕ ದೇವತೆಗಳು ಮತ್ತು ದೇಗುಲದ ಹೆಸರಿನಲ್ಲಿ ಮತಯಾಚಿಸುತ್ತಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನರ್ಹಗೊಳಿಸಲು ಮುಖ್ಯಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು (ಸೋಮವಾರ) ವಜಾಗೊಳಿಸಿದೆ.
ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ. ಯಾವುದೇ ದೂರಿನ ಬಗ್ಗೆ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈಚೆಗೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದಲ್ಲಿ ಹಿಂದೂ ದೇವತೆಗಳು ಮತ್ತು ಹಿಂದೂ ಪೂಜಾ ಸ್ಥಳಗಳು ಹಾಗೂ ಸಿಖ್ ದೇವತೆಗಳು ಮತ್ತು ಸಿಖ್ ಆರಾಧನಾ ಸ್ಥಳಗಳನ್ನು ಉಲ್ಲೇಖಿಸಿ ಬಿಜೆಪಿಗೆ ಮತ ಹಾಕುವಂತೆ ಮತಯಾಚಿಸಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ.
ಚುನಾವಣಾ ಆಯೋಗಪರ ಹಾಜರಾದ ವಕೀಲ ಸಿದ್ದಾಂತ್ ಕುಮಾರ್ ಮಾತನಾಡಿ, ‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ. ಪ್ರತಿನಿತ್ಯ ಇಂತಹ ಹಲವು ಅರ್ಜಿಗಳು ದಾಖಲಾಗುತ್ತಿರುತ್ತವೆ. ಕಾನೂನಿನ ಪ್ರಕಾರ ಕ್ರಮತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.