ಭುವನೇಶ್ವರ: 15 ವರ್ಷಗಳ ನಂತರ ಚುನಾವಣಾ ಕಣಕ್ಕೆ ಮರಳಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಅವರ ಜೊತೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕೂಡ ಇದ್ದರು. ಪ್ರಧಾನ್ ಅವರನ್ನು ಸಂಬಲ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಪಾತ್ರ ಅವರನ್ನು ಪುರಿಯಿಂದ ಮತ್ತೆ ಕಣಕ್ಕಿಳಿಸಲಾಗಿದೆ.
'ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಅವಿಭಾಜ್ಯ ಅಂಗವಾದ ಜಗನ್ನಾಥನ ಆಶೀರ್ವಾದ ಯಾವಾಗಲೂ ನಮ್ಮ ಮೇಲಿದೆ. ಸಂಬಲ್‌ಪುರದಿಂದ ಲೋಕಸಭೆಗೆ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲು ಜಗನ್ನಾಥನ ಆಶೀರ್ವಾದ ಪಡೆದಿರುವುದು ನನ್ನ ಭಾಗ್ಯ. ಭಗವಂತನ ಆಶೀರ್ವಾದವು ಸಾರ್ವಜನಿಕ ಸೇವೆ ಮಾಡಲು ನನಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ನನ್ನ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಜನ ಸೇವೆಗಾಗಿ ಬಳಸಿಕೊಳ್ಳಲು ನಾನು ಯಾವಾಗಲೂ ಶ್ರಮಿಸುತ್ತೇನೆ' ಎಂದು ಧರ್ಮೇಂದ್ರ ಪ್ರಧಾನ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಡಿಶಾದಲ್ಲಿ ಬದಲಾವಣೆಯ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ ಮತ್ತು ಕೇಂದ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ–ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಪ್ರಧಾನ್ ಅವರು 2009ರಲ್ಲಿ ಬಿಜೆಪಿ ಮತ್ತು ಬಿಜೆಡಿ ನಡುವಿನ ಮೈತ್ರಿ ಅಂತ್ಯಗೊಂಡಾಗ ಕೊನೆಯ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2000ರಲ್ಲಿ ಒಡಿಶಾ ವಿಧಾನಸಭೆಗೆ ಮತ್ತು 2004ರಲ್ಲಿ ದಿಯೋಗರ್ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಬಳಿಕ ಅವರು 2009 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 2012ರಲ್ಲಿ ಬಿಹಾರದಿಂದ ಮತ್ತು 2018ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಒಡಿಶಾದ 21 ಲೋಕಸಭಾ ಸ್ಥಾನಗಳ ಪೈಕಿ 18 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಭಾನುವಾರ ಪ್ರಕಟಿಸಿದ್ದು, ನಾಲ್ವರು ಹಾಲಿ ಸಂಸದರನ್ನು ಕೈಬಿಟ್ಟಿದೆ. ಬಿಜೆಡಿ ಹಾಗೂ ಕಾಂಗ್ರೆಸ್ ಇಲ್ಲಿಯವರೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.