ನವದೆಹಲಿ: ಈವರೆಗೂ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ 215 ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ 266 ಕ್ಷೇತ್ರಗಳನ್ನು ಚುನಾವಣಾ ಆಯೋಗ ಗುರುತಿಸಿದ್ದು, ಅಲ್ಲಿನ ಮತದಾನ ಪ್ರಮಾಣ ಹೆಚ್ಚಳಕ್ಕೆ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ.
ಹೀಗೆ ಕಡಿಮೆ ಮತದಾನ ಪ್ರಮಾಣ ದಾಖಲಾಗಿರುವುದರಿಂದ 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಇದರಲ್ಲಿ ಬಿಹಾರ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ, ಗುಜರಾತ್, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ರಾಜ್ಯಗಳ ಹಲವು ಕ್ಷೇತ್ರಗಳು ಕಡಿಮೆ ಮತದಾನ ದಾಖಲಿಸಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳ ಕೆಲ ಕ್ಷೇತ್ರಗಳಲ್ಲಿ ಶೇ 67.40ಕ್ಕಿಂತ ಕಡಿಮೆ ಮತದಾನ ದಾಖಲಾಗಿದೆ.
ಬಿಹಾರ ಮತ್ತು ಉತ್ತರ ಪ್ರದೇಶದ ಆಯ್ದ ಜಿಲ್ಲೆಗಳ ಪ್ರಮುಖ ನಗರಗಳ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಲಾಗಿದ್ದು, ಮತದಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳುವಂತೆ ಮಾಡಲು ಯೋಜನೆ ರೂಪಿಸಲು ಆಯೋಗ ಸೂಚಿಸಿದೆ.
‘ಕೇವಲ ಮತದಾರರನ್ನು ತಲುಪುವುದರಿಂದ ಮತದಾನ ಪ್ರಮಾಣ ಹೆಚ್ಚಾಗುವುದಿಲ್ಲ. ಬದಲಿಗೆ ಬೇರೆಯದೇ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಇವು ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಲ್ಲಿರಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.