ನೀಲಗಿರೀಸ್, ತಮಿಳುನಾಡು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಯಾಣಿಸಿದ ಹೆಲಿಕಾಪ್ಟರ್‌ಅನ್ನು ಚುನಾವಣಾ ಅಧಿಕಾರಿಗಳು ಸೋಮವಾರ ತಪಾಸಣೆ ನಡೆಸಿದರು.
ರಾಹುಲ್ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಕೇರಳದ ವಯನಾಡ್‌ಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ಅನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಇಲ್ಲಿ ತಪಾಸಣೆಗೆ ಒಳಪಡಿಸಿದರು ಎಂದು ಪೊಲೀಸರು ತಿಳಿಸಿದರು.
ಬಿಜೆಪಿ ನಾಯಕರ ಹೆಲಿಕಾಪ್ಟರ್ ತಪಾಸಣೆ ನಡೆಸಿ–ಮಮತಾ (ಕೂಚ್‌ಬಿಹಾರ್ ವರದಿ): ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಬಳಸುವ ಹೆಲಿಕಾಪ್ಟರ್‌ಗಳನ್ನು ತಪಾಸಣೆಗೆ ಒಳಪಡಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.
ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರು ಪ್ರಯಾಣಿಸಿದ ಹೆಲಿಕಾಪ್ಟರ್‌ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು.
‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರ ಹೆಲಿಕಾಪ್ಟರ್‌ಅನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಹಣ ಮತ್ತು ಚಿನ್ನ ಇರುವುದಾಗಿ ಖಚಿತ ಮಾಹಿತಿ ಲಭಿಸಿದ ಕಾರಣ ತಪಾಸಣೆ ನಡೆಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ನಾವು ಅಂತಹ ಕೃತ್ಯದಲ್ಲಿ ತೊಡಗುವುದಿಲ್ಲ’ ಎಂದು ಮಮತಾ ಹೇಳಿದ್ದಾರೆ.
‘ಬಿಜೆಪಿಯವರು ಅಂತಹ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಜೆಪಿ ನಾಯಕರ ಹೆಲಿಕಾಪ್ಟರ್‌ಅನ್ನು ತಪಾಸಣೆ ನಡೆಸುವ ಧೈರ್ಯ ಮಾಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.