ADVERTISEMENT

Election Result: ಭದ್ರಕೋಟೆಯಲ್ಲೇ ಕ್ಷೀಣಿಸಿತು ಕಮಲ ಪಾಳಯದ ಬಲ

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಕಮಲ ಪಾಳಯಕ್ಕೆ ಭಾರಿ ಹಿನ್ನಡೆ

ಮಹಮ್ಮದ್ ನೂಮಾನ್
Published 4 ಜೂನ್ 2024, 23:22 IST
Last Updated 4 ಜೂನ್ 2024, 23:22 IST
   
ಅಯೋಧ್ಯೆ ರಾಮಮಂದಿರ ನಿರ್ಮಾಣವು ಈ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಅಯೋಧ್ಯೆ ನಗರವನ್ನು ಒಳಗೊಂಡಿರುವ ಫೈಜಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಎಡವಿರುವುದೇ ಇದಕ್ಕೆ ಸಾಕ್ಷಿ

ಸತತ ಮೂರನೇ ಬಾರಿ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುವ ಕನಸು ಕಂಡಿದ್ದ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಅನಿರೀಕ್ಷಿತ ಹಿನ್ನಡೆ ಎದುರಾಗಿದ್ದು, ಸರ್ಕಾರ ರಚಿಸಲು ಮೈತ್ರಿಕೂಟದ ಇತರ ಪಕ್ಷಗಳ ನೆರವು ಅವಲಂಬಿಸಬೇಕಾಗಿದೆ. 

ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಲು ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ತೋರಲಿರುವ ಸಾಧನೆ ನಿರ್ಣಾಯಕ ಆಗಿತ್ತು. ಉತ್ತರ ಪ್ರದೇಶ ಅಲ್ಲದೆ ರಾಜಸ್ಥಾನದಲ್ಲೂ ಕಮಲ ಪಾಳಯ ಹಿನ್ನಡೆ ಅನುಭವಿಸಿದೆ. ಆದರೆ ಗುಜರಾತ್‌, ಮಧ್ಯಪ್ರದೇಶ, ದೆಹಲಿಯಲ್ಲಿ ಪ್ರಾಬಲ್ಯ ಮುಂದುವರಿದಿದೆ ಮತ್ತು ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಫಲ ಕೊಟ್ಟಿದ್ದರಿಂದ ಎನ್‌ಡಿಎ, ಬಹುಮತದತ್ತ ಹೆಜ್ಜೆಯಿಟ್ಟಿದೆ. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದ್ದಕ್ಕೆ ದೇಶದ ಜನರು ಸಂತಸಪಟ್ಟಿದ್ದರು. ಆದರೆ, ಆ ಸಂತಸ ಮತಗಳಾಗಿ ಪರಿವರ್ತನೆ ಆಗಲಿಲ್ಲ. ಅಯೋಧ್ಯೆ ನಗರವನ್ನು ಒಳಗೊಂಡಿರುವ ಫೈಜಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಎಡವಿರುವುದೇ ಇದಕ್ಕೆ ಸಾಕ್ಷಿ. 

ADVERTISEMENT

‘ಯೋಗಿ ಆದಿತ್ಯನಾಥ ಮಾದರಿ’ಯನ್ನು ಬಿಜೆಪಿಯು ದೇಶದ ಉದ್ದಗಲಕ್ಕೂ ಪ್ರಚಾರ ಮಾಡಿತ್ತು. ಆದರೆ ‘ಯೋಗಿ ಮಾದರಿ’ಯನ್ನು ತಿರಸ್ಕರಿಸುವ ಸಂದೇಶವನ್ನು ಅಲ್ಲಿನ ಜನರು ಇಡೀ ದೇಶಕ್ಕೆ ರವಾನಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಆದಿತ್ಯನಾಥ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗಿನ ಫಲಿತಾಂಶವು ಆ ಕುರಿತ ಚರ್ಚೆಯ ಕಾವು ಹೆಚ್ಚಿಸುವ ಸಾಧ್ಯತೆಯಿದೆ.

ಅಖಿಲೇಶ್‌ ಯಾದವ್ ಅವರು ಅಭ್ಯರ್ಥಿಗಳ ಆಯ್ಕೆಯ ವೇಳೆ ನಡೆಸಿದ ತಂತ್ರಗಾರಿಕೆ ಎಸ್‌ಪಿಗೆ ಫಲ ನೀಡಿದೆ. ಜಾತಿ ಸಮೀಕರಣ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್‌ ಹಂಚಿಕೆ ಮಾಡಿದ್ದರು. ಯಾದವ ಸಮುದಾಯ, ಮುಸ್ಲಿಮರು ಮತ್ತು ದಲಿತರ ಮತಗಳು ಹಂಚಿ ಹೋಗದೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳ ಪರ ಬಿದ್ದಿವೆ. ಬಿಎಸ್‌ಪಿಯ ಮತಗಳೂ ಮೈತ್ರಿಕೂಟದ ಪರವಾಗಿ ಬಿದ್ದವು. 

ಅಖಿಲೇಶ್‌ ಅವರು ತಮ್ಮ ಪಕ್ಷವು ‘ಪಿಡಿಎ’ ಅಂದರೆ, ಪಿಚ್ಡೆ (ಹಿಂದುಳಿದ), ದಲಿತ ಮತ್ತು ಅಲ್ಪಸಂಖ್ಯಾತರ ಪರವಾಗಿದೆ ಎಂದು ಹೇಳಿ ಪ್ರಚಾರ ಕೈಗೊಂಡಿದ್ದರು. ಅದು ಫಲ ನೀಡಿದೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್‌ ಜತೆಯಾಗಿ ನಡೆಸಿದ ಪ್ರಚಾರ ಸಭೆಗಳೂ, ಬಿಜೆಪಿಯ ಲೆಕ್ಕಾಚಾರ ಬುಡಮೇಲುಗೊಳ್ಳಲು ಕಾರಣವಾದವು. 

ಮುಂದುವರಿದ ‘ಮಮತಾ’ ಮ್ಯಾಜಿಕ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಡೆಸಿದ ‘ವಿಭಜಕ ರಾಜಕಾರಣ’ವನ್ನು ಅಲ್ಲಿನ ಮತದಾರರು ಬಂಗಾಳ ಕೊಲ್ಲಿಗೆ ತಳ್ಳಿದ್ದಾರೆ. ಪ್ರಧಾನಿ ಮೋದಿ ಅವರು ಬಂಗಾಳದಲ್ಲಿ ನಡೆಸಿದ್ದ ಎಲ್ಲ ರ್‍ಯಾಲಿಗಳಲ್ಲಿ ಸಿಎಎ ಮತ್ತು ‘ಒಳನುಸುಳುವಿಕೆ’ ವಿಷಯ ಪ್ರಸ್ತಾಪ ಮಾಡಿದ್ದರು. ಸಂದೇಶ್‌ಖಾಲಿ ಘಟನೆಯನ್ನು ಮುಂದಿರಿಸಿ ಮಹಿಳೆಯರ ಮತಗಳನ್ನು ಸೆಳೆಯಲು ನಡೆಸಿದ ಪ್ರಯತ್ನವೂ ಯಶಸ್ಸು ಕಾಣಲಿಲ್ಲ. 35 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದ ಬಿಜೆಪಿ, ಬಹಳ ಪ್ರಯಾಸದಿಂದ ಎರಡಂಕಿ ತಲುಪಿದೆ. ಮಮತಾ ಬ್ಯಾನರ್ಜಿ ಅವರ ‘ಮ್ಯಾಜಿಕ್‌’ ಮುಂದುವರಿದಿದೆ.

ಬಿಜೆಪಿಯು ಮಹಾರಾಷ್ಟ್ರದಲ್ಲೂ ಹಿನ್ನಡೆ ನಿರೀಕ್ಷಿಸಿರಲಿಲ್ಲ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಪ್ರಧಾನಿ ಮೋದಿ ಅವರು ವೈಯಕ್ತಿಕ ಟೀಕೆ ಮಾಡಿದ್ದು, ಮರಾಠರ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬುದು ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲಿಸಿದೆ. 

ಆದರೆ ಮೋದಿ ಅವರ ತವರು ರಾಜ್ಯ ಗುಜರಾತ್, ಮಧ್ಯಪ್ರದೇಶ, ದೆಹಲಿ, ಉತ್ತರಾಖಂಡ ಮತ್ತು ಛತ್ತೀಸಗಡ ತನ್ನ ಭದ್ರಕೋಟೆ ಎಂಬುದನ್ನು ಬಿಜೆಪಿ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಈ ರಾಜ್ಯಗಳಲ್ಲಿ ಅಚ್ಚರಿ ಉಂಟುಮಾಡಲು ‘ಇಂಡಿಯಾ’ ಮೈತ್ರಿಕೂಟಕ್ಕೆ ಆಗಲಿಲ್ಲ. ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರನ್ನು ಎನ್‌ಡಿಎ ತೆಕ್ಕೆಗೆ ಸೆಳೆದುಕೊಂಡದ್ದು ಅಧಿಕಾರವನ್ನು ತನ್ನ ಕೈಯಲ್ಲೇ ಇರಿಸಿಕೊಳ್ಳಲು ಬಿಜೆಪಿಗೆ ನೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.