ADVERTISEMENT

Election Results: ಪ್ರಮುಖ ರಾಜ್ಯಗಳ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 23:03 IST
Last Updated 4 ಜೂನ್ 2024, 23:03 IST
   

ಬಿಜೆಪಿಗೆ ಕೈಕೊಟ್ಟ ಉತ್ತರ ಪ್ರದೇಶ

ಬಿಜೆಪಿಯು ಉತ್ತರ ಪ್ರದೇಶದ ಮೇಲೆ ಹೊಂದಿದ್ದ ಆಧಿಪತ್ಯಕ್ಕೆ ಈ ಚುನಾವಣೆಯಲ್ಲಿ ತೆರೆಬಿದ್ದಿದೆ. ಅತಿಹೆಚ್ಚು ಅಂದರೆ 80 ಸದಸ್ಯರನ್ನು ಲೋಕಸಭೆಗೆ ಕಳುಹಿಸುವ ಈ ರಾಜ್ಯವು, ಕೇಂದ್ರದಲ್ಲಿ ಅಧಿಕಾರ ಹಿಡಿಯುವವರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ.

2014 ಮತ್ತು 2019 ರಲ್ಲಿ ಬಿಜೆಪಿ ಇಲ್ಲಿ ಕ್ರಮವಾಗಿ 71 ಮತ್ತು 62 ಸ್ಥಾನಗಳನ್ನು ಜಯಿಸಿತ್ತು. ಇದರಿಂದ ಪಕ್ಷಕ್ಕೆ ಏಕಾಂಗಿಯಾಗಿ 272 ಸ್ಥಾನಗಳ ಗಡಿ ದಾಟಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಪಕ್ಷ 33 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. 

ADVERTISEMENT

ಅಖಿಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ ಮತ್ತು ಕಾಂಗ್ರೆಸ್‌ ನಡುವಣ ಮೈತ್ರಿ ಫಲಿಸಿದೆ. ಬಿಜೆಪಿಗೆ ದೊಡ್ಡ ಹೊಡೆತ ನೀಡಿರುವ ಎಸ್‌ಪಿ, 37 ಸ್ಥಾನಗಳಲ್ಲಿ ಗೆದ್ದಿದೆ. ಕಳೆದ ಸಲ ಪಕ್ಷವು ಕೇವಲ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019 ರಲ್ಲಿ ಕೇವಲ ಒಂದು ಸ್ಥಾನ ಗಳಿಸಿದ್ದ ಕಾಂಗ್ರೆಸ್‌, ಈ ಬಾರಿ ಆರು ಸ್ಥಾನಗಳನ್ನು ಗೆದ್ದು ತನ್ನ ಶಕ್ತಿ ವೃದ್ಧಿಸಿಕೊಂಡಿದೆ. 

ಆಗೊಮ್ಮೆ, ಈಗೊಮ್ಮೆ ಅಚ್ಚರಿಯ ಫಲಿತಾಂಶ ನೀಡುವ ಬಿಎಸ್‌ಪಿ ಈ ಬಾರಿ ‘ಸೊನ್ನೆ’ ಸುತ್ತಿದೆ. ಮಾಯಾವತಿ ನೇತೃತ್ವದ ಪಕ್ಷ ಕಳೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. 

ದೆಹಲಿ: ಬಿಜೆಪಿ ‘ಹ್ಯಾಟ್ರಿಕ್‌ ಕ್ಲೀನ್‌ಸ್ವೀಪ್’

ರಾಷ್ಟ್ರದ ರಾಜಧಾನಿಯಲ್ಲಿ ಬಿಜೆಪಿಯ ಗೆಲುವಿನ ಓಟ ಈ ಬಾರಿಯೂ ಮುಂದುವರಿದಿದೆ. 2014 ಮತ್ತು 2019 ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಮಲ ಪಾಳಯ ಈ ಬಾರಿಯೂ ಅದೇ ಸಾಧನೆ ಪುನರಾವರ್ತಿಸಿದ್ದು, ‘ಕ್ಲೀನ್‌ಸ್ವೀಪ್‌’ ಮಾಡುವುದರಲ್ಲಿ ‘ಹ್ಯಾಟ್ರಿಕ್‌’ ಸಾಧಿಸಿದೆ.

ಎಎಪಿ–ಕಾಂಗ್ರೆಸ್‌ ಮೈತ್ರಿಯು ಅಚ್ಚರಿಯ ಫಲಿತಾಂಶ ನೀಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಚುನಾವಣೆಗೆ ಕೆಲವೇ ದಿನಗಳಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು. ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದರು. ಪ್ರಚಾರ ಸಭೆಗಳಲ್ಲಿ ತಮ್ಮ ಬಂಧನ ವಿಚಾರವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ಟೀಕಿಸಿ ಮತಯಾಚನೆ ಮಾಡಿದ್ದರು. ಆದರೆ ಮತದಾರರು ಮಾತ್ರ ಬಿಜೆಪಿಯ ಕೈಬಿಡಲಿಲ್ಲ. 

‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರದಂತೆ ಎಎಪಿಯು ನಾಲ್ಕು ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ ಪಕ್ಷವು ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿಯು ಕಳೆದ ಬಾರಿ ಗೆದ್ದ ಆರು ಸಂಸದರಿಗೆ ವಿವಿಧ ಕಾರಣಗಳಿಂದ ಟಿಕೆಟ್‌ ನೀಡದೆ, ಹೊಸಬರಿಗೆ ಮಣೆ ಹಾಕಿತ್ತು. 

ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಕನ್ಹಯ್ಯ ಕುಮಾರ್‌ ಅವರು ಬಿಜೆಪಿಯ ಮನೋಜ್‌ ತಿವಾರಿ ಎದುರು ಪರಾಭವಗೊಂಡರು.

ಗುಜರಾತ್‌: ದಶಕದ ಬಳಿಕ ಖಾತೆ ತೆರೆದ ಕಾಂಗ್ರೆಸ್

ಕಳೆದ ಎರಡು ಚುನಾವಣೆಗಳಲ್ಲಿ ಗುಜರಾತ್‌ನಲ್ಲಿ ಖಾತೆ ತೆರೆಯಲು ವಿಫಲವಾಗಿದ್ದ ಕಾಂಗ್ರೆಸ್‌, ಈ ಬಾರಿ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 10 ವರ್ಷಗಳ ಬಳಿಕ ಖಾತೆ ತೆರೆಯಿತಲ್ಲದೆ, ಬಿಜೆಪಿಯ ‘ಹ್ಯಾಟ್ರಿಕ್‌ ಕ್ಲೀನ್‌ಸ್ವೀಪ್‌’ ಸಾಧನೆಗೆ ತಡೆಯೊಡ್ಡಿದೆ. 2014, 2019 ರಲ್ಲಿ ಎಲ್ಲ 26 ಸ್ಥಾನಗಳನ್ನು ಜಯಿಸಿದ್ದ ಬಿಜೆಪಿ ಈ ಬಾರಿ 25 ಸ್ಥಾನ ಗೆದ್ದುಕೊಂಡಿದೆ. 

ಉತ್ತರ ಗುಜರಾತ್‌ನ ಬನಾಸಕಾಂಠಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗನೀಬೆನ್‌ ಠಾಕೂರ್ ಅವರು 33 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿಯ ರೇಖಾಬೆನ್‌ ಚೌಧರಿ ಅವರನ್ನು ಮಣಿಸಿದರು. 

ಪಠಾಣ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭರತ್‌ಸಿಂಹ ಅವರು ಬಿಜೆಪಿಯ ಚಂದನ್‌ ಠಾಕೂರ್‌ಗೆ ತಕ್ಕ ಪೈಪೋಟಿ ನೀಡಿದರೂ, ಅಂತಿಮವಾಗಿ 30 ಸಾವಿರದಷ್ಟು ಮತಗಳಿಂದ ಪರಾಭವಗೊಂಡರು. ಇತರ ಕ್ಷೇತ್ರಗಳಲ್ಲಿ ಬಿಜೆಪಿಗೆ ಸರಿಸಾಟಿಯಾಗಿ ನಿಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.

ಚುನಾವಣೆಯ ಅವಧಿಯಲ್ಲಿ ಕೇಂದ್ರ ಸಚಿವ ಪರಷೋತ್ತಮ್‌ ರೂಪಾಲಾ ಅವರು ನೀಡಿದ್ದ ಹೇಳಿಕೆ ವಿರೋಧಿಸಿ ರಜಪೂತ ಸಮುದಾಯದವರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರೂಪಾಲಾ ಕ್ಷಮೆಯಾಚಿಸಿದ್ದರೂ, ರಜಪೂತರ ಕೋಪ ತಣಿದಿರಲಿಲ್ಲ. ಬನಾಸಕಾಂಠಾ ಮತ್ತು ಪಠಾಣ್ ಕ್ಷೇತ್ರಗಳಲ್ಲಿ ರಜಪೂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  

ರಾಜಸ್ಥಾನ: ಪುಟಿದೆದ್ದ ಕಾಂಗ್ರೆಸ್‌

ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. 14 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯದ ನಗೆ ಬೀರಿದರೆ, ಕಾಂಗ್ರೆಸ್‌ ಅಭ್ಯರ್ಥಿಗಳು 8 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಇತರರು ಗೆಲುವಿನ ಸವಿ ಉಂಡಿದ್ದಾರೆ. 2019ರ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಶೂನ್ಯ ಸಾಧನೆ ಮಾಡುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಎನ್‌ಡಿಎಯು 24 ಕ್ಷೇತ್ರಗಳಲ್ಲಿ ‌ಹಾಗೂ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಈ ಬಾರಿ ಪುಟಿದೆದ್ದಿರುವ ಕಾಂಗ್ರೆಸ್‌, ಬಿಜೆಪಿಗೆ ತೀವ್ರ ಪೈಪೋಟಿ ನೀಡಿದೆ. ಈ ಸಲ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಶೇ 61.34 ರಷ್ಟು ಮತದಾನ ದಾಖಲಾಗಿತ್ತು. ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಇಲ್ಲಿ ‌ಹಿನ್ನಡೆ ಉಂಟಾಗಿದೆ. ಬಿಎಸ್‌ಪಿಯು 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಿಂದ ಬಿಜೆಪಿ ವಿರೋಧಿ ಮತಗಳು ಹಂಚಿಹೋಗಲಿವೆ ಎಂದು ವಿಶ್ಲೇಷಿಸಲಾಗಿತ್ತು.

ಮಹಾರಾಷ್ಟ್ರ: ಎನ್‌ಡಿಎಗೆ ಮುಖಭಂಗ

ಶಿವಸೇನಾ ಮತ್ತು ಎನ್‌ಸಿಪಿ ಇಬ್ಭಾಗವಾಗಿರುವ ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದ ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣಾ ಫಲಿತಾಂಶವು ತೀವ್ರ ಹೊಡೆತ ನೀಡಿದೆ.  ಬಿಜೆಪಿ ನೇತೃತ್ವದ ‘ಮಹಾಯುತಿ’ ಒಕ್ಕೂಟವು ಕೇವಲ 11 ಕ್ಷೇತ್ರಗಳಲ್ಲಷ್ಟೇ ಗೆದ್ದಿದೆ. ಮಹಾ ವಿಕಾಸ್‌ ಆಘಾಡಿಯು 30 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು 12 ಕ್ಷೇತ್ರಗಳಲ್ಲಿ, ಶಿವಸೇನಾ ಉದ್ಧವ್‌ ಠಾಕ್ರೆ ಬಣದ ಅಭ್ಯರ್ಥಿಗಳು 10ಕ್ಷೇತ್ರಗಳಲ್ಲಿ ಹಾಗೂ ಎನ್‌ಸಿಪಿ ಶರದ್‌ ಪವಾರ್ ಬಣದ ಅಭ್ಯರ್ಥಿಗಳು 7 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದ ಶಿವಸೇನಾ ಏಕನಾಥ ಶಿಂದೆ ಬಣದ ಹಾಗೂ ಎನ್‌ಸಿಪಿ ಅಜಿತ್‌ ಪವಾರ್‌ ಬಣಗಳ ಅಭ್ಯರ್ಥಿಗಳು ಮುಗ್ಗರಿಸುವ ಮೂಲಕ ‘ಮುಹಾಯುತಿ’ ಒಕ್ಕೂಟಕ್ಕೆ ಭಾರಿ ಮುಖಭಂಗವಾಗಿದೆ. ‘ಮಹಾ ವಿಕಾಸ್‌ ಆಘಾಡಿ’ ಸರ್ಕಾರವನ್ನು ಬೀಳಿಸಿ ಶಿಂದೆ ಮತ್ತು ಅಜಿತ್‌ ಪವಾರ್‌ ನೆರವಿನಿಂದ ಸರ್ಕಾರ ರಚಿಸಿಯೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ. 2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 

ಬಿಹಾರ: ಎನ್‌ಡಿಎ ಕೈಬಿಡದ ಮತದಾರ

ಬಿಹಾರದಲ್ಲಿ ಎನ್‌ಡಿಎ ಒಕ್ಕೂಟವು ಉತ್ತಮ ಸಾಧನೆ ಮಾಡುವ ಮೂಲಕ ‘ಇಂಡಿಯಾ’ ಒಕ್ಕೂಟಕ್ಕೆ ಏಟು ನೀಡಿದೆ. ಚುನಾವಣೆಗೂ ಮುನ್ನ ಜೆಡಿಯು ಪಕ್ಷವನ್ನು ಎನ್‌ಡಿಎ ಒಕ್ಕೂಟಕ್ಕೆ ಸೆಳೆದುಕೊಂಡಿರುವುದು ಬಿಜೆಪಿಗೆ ಆಸರೆಯಾಗಿದೆ. ಜೆಡಿಯು 12 ಕ್ಷೇತ್ರದಲ್ಲಿ ಹಾಗೂ ಬಿಜೆಪಿ 12 ಕ್ಷೇತ್ರದಲ್ಲಿ ಗೆದ್ದಿದೆ. ಕಾಂಗ್ರೆಸ್‌ 3 ಕ್ಷೇತ್ರಗಳಲ್ಲಿ ಹಾಗೂ ಆರ್‌ಜೆಡಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2019ರ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವು 39 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದಲ್ಲಿದ್ದು ಚುನಾವಣೆ ಎದುರಿಸಿದ್ದ ಜೆಡಿಯು ಬಳಿಕ ಒಕ್ಕೂಟವನ್ನು ತೊರೆದು ಆರ್‌ಜೆಡಿ ಜೊತೆ ಕೈಜೋಡಿಸಿ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಈ ಬಾರಿ ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಮುಖಂಡರು ಜೆಡಿಯುಅನ್ನು ಮತ್ತೆ ಎನ್‌ಡಿಎಗೆ ಸೇರಿಸಿದ್ದರು. ಇದರಿಂದ ಎನ್‌ಡಿಎಗೆ ಬಹುಮತದ ಸಂಖ್ಯೆ ದಾಟಲು ಅನುಕೂಲವಾಗಿದೆ. ನಿತೀಶ್‌ ಅವರು ಪದೇ ಪದೇ ಒಕ್ಕೂಟ ಬದಲಿಸುತ್ತಿರುವುದರಿಂದ ಮತದಾರರು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಕೈ ಹಿಡಿಯಬಹುದೆಂದು ಈ ಎರಡು ಪಕ್ಷಗಳ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಳಗೊಂಡಿರುವ ‘ಇಂಡಿಯಾ’ ಒಕ್ಕೂಟವು ಉತ್ತಮ ಸಾಧನೆಯನ್ನೇ ಮಾಡಿದೆ. ಬಿಹಾರದಲ್ಲಿ ಈ ಬಾರಿ ಶೇ 56.19 ರಷ್ಟು ಮತದಾನವಾಗಿತ್ತು.

ಛತ್ತೀಸಗಢ: ಬಿಜೆಪಿ ಜಯಭೇರಿ

ಛತ್ತೀಸಗಢದಲ್ಲಿ ಆಡಳಿತಾರೂಢ ಬಿಜೆಪಿಯು 10 ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಪಕ್ಷವು ಒಂದು ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು 9 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದೆ. ಕಾಂಗ್ರೆಸ್‌ ಪಕ್ಷವು ಈ ಬಾರಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರನ್ನು ರಾಜನಂದಗಾಂವ್‌ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಅವರು ಬಿಜೆಪಿ ಅಭ್ಯರ್ಥಿ ಸಂತೋಷ್‌ ಪಾಂಡೆ ಎದುರು ಮುಗ್ಗರಿಸಿದ್ದಾರೆ. ಸಂತೋಷ್‌ ಪಾಂಡೆ ಅವರು ಕಳೆದ ಚುನಾವಣೆಯಲ್ಲೂ ಇಲ್ಲಿಂದ ಗೆದ್ದಿದ್ದರು. ಇವರನ್ನು ಮಣಿಸುವ ಉದ್ದೇಶದಿಂದಲೇ ಕಾಂಗ್ರೆಸ್‌, ಬಘೆಲ್‌ ಅವರನ್ನು ಕಣಕ್ಕಿಳಿಸಿತ್ತು ಮತ್ತು ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ‘ಕೈ’ ಪಕ್ಷದ ಲೆಕ್ಕಾಚಾರ ಬುಡಮೇಲಾಗಿದೆ. ಛತ್ತೀಸ್‌ಗಢದ 11 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. 

ಮಧ್ಯಪ್ರದೇಶ: ಮುಂದುವರಿದ ಬಿಜೆಪಿ ಪ್ರಾಬಲ್ಯ

ಮಧ್ಯಪ್ರದೇಶದ ಎಲ್ಲ 29 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹಿಂದಿನ ಎರಡು ಅವಧಿಗಳಲ್ಲಿಯೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. 

ಆಲ್‌ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಕಾಂಗ್ರೆಸ್‌, 28 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಯೊಬ್ಬರು ಬಿಜೆಪಿಗೆ ಪಕ್ಷಾಂತರವಾದ ಕಾರಣ ಕಾಂಗ್ರೆಸ್, 27 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 

2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಕ್ರಮವಾಗಿ 27 ಹಾಗೂ 28 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ ಕ್ರಮವಾಗಿ 2 ಮತ್ತು 1 ಸ್ಥಾನ ಗಳಿಸಿತ್ತು. ಇದ್ದ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಕೆಲ ತಿಂಗಳ ಹಿಂದೆಯಷ್ಟೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದ ಬಿಜೆಪಿ ವರ್ಚಸ್ಸು ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಿದೆ.

ವಿದಿಶಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌  ಅವರು ಎದುರಾಳಿ ಪ್ರತಾಪ್‌ ಬಾನು ಶರ್ಮ ಅವರನ್ನು ಮಣಿಸಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುನಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವಿನ ನಗೆ ಬೀರಿದ್ದಾರೆ. 

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರು (ರಾಜಗಢ ಕ್ಷೇತ್ರ) ಪರಾಭವಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಪುತ್ರ, ಸಂಸದ ನಕುಲ್ ಕಮಲ್‌ನಾಥ್‌ ಸೋಲುಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.