ಮಹೇಂದ್ರಗಢ(ಹರಿಯಾಣ): ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಮುಂದಿನ ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಹಸು ಹಾಲು ಕೊಡುವ ಮುನ್ನವೇ ಮೈತ್ರಿಕೂಟದಲ್ಲಿ ತುಪ್ಪಕ್ಕಾಗಿ ಜಗಳ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಹರಿಯಾಣದ ಮಹೇದ್ರಗಢದಲ್ಲಿ ಪಕ್ಷದ ಅಭ್ಯರ್ಥಿ ಪರ ಗುರುವಾರ ಪ್ರಚಾರ ನಡೆಸಿ ಮಾತನಾಡಿದ ಅವರು ‘ನಾನು ಬದುಕಿರುವವರೆಗೂ ದಲಿತ ಮತ್ತು ಆದಿವಾಸಿಗಳಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.
‘ಚುನಾವಣೆಯಲ್ಲಿ ನೀವು ಕೇವಲ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವುದಿಲ್ಲ ಬದಲಾಗಿದ ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತೀರಿ’ ಎಂದರು.
ಇಂಡಿಯಾ ಬಣದ ಬಗ್ಗೆ ಕಿಡಿಕಾರಿದ ಅವರು, ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಅವಕಾಶ ನೀಡಲಿಲ್ಲ. ಇಂಡಿಯಾ ಬಣ ಅತಿಯಾದ ಕೋಮುವಾದಿ, ಜಾತಿವಾದಿ ಮತ್ತು ಸ್ವಜನಪಕ್ಷಪಾತಿಯಾಗಿದೆ. ಐದು ವರ್ಷಗಳಲ್ಲಿ 5 ಪ್ರಧಾನಿಯನ್ನು ಪಡೆಯುವ ಬಗ್ಗೆ ಮಾತನಾಡುತ್ತಿದೆ. ಅವರ ಸೋಲಿಗೆ ಯಾರನ್ನು ದೂಷಿಸಬೇಕು ಎಂಬುದಕ್ಕೆ ಈಗಾಗಲೇ ಆಧಾರಗಳನ್ನು ತಯಾರಿಸಲು ಪ್ರಾರಂಭಿಸಿದೆ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.