ADVERTISEMENT

LS Polls 2024: ಕೊನೇ ಹಂತದ ಮತದಾನ ನಾಳೆ; ವಾರಾಣಸಿಯಲ್ಲಿ ಮೋದಿ ಭವಿಷ್ಯ ನಿರ್ಧಾರ

ಪಿಟಿಐ
Published 31 ಮೇ 2024, 13:30 IST
Last Updated 31 ಮೇ 2024, 13:30 IST
<div class="paragraphs"><p>ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಗೆ ಮತಗಟ್ಟೆ ಅಧಿಕಾರಿಗಳು ಶುಕ್ರವಾರ ದೋಣಿಯಲ್ಲಿ ಸಾಗಿದರು</p></div>

ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಗೆ ಮತಗಟ್ಟೆ ಅಧಿಕಾರಿಗಳು ಶುಕ್ರವಾರ ದೋಣಿಯಲ್ಲಿ ಸಾಗಿದರು

   

ಪಿಟಿಐ ಚಿತ್ರ

ವಾರಾಣಸಿ: ಪ್ರಸಕ್ತ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದೆ. ಇದರಲ್ಲಿ ಏಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 57 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 

ADVERTISEMENT

ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಪಂಜಾಬ್‌ನ  13 ಕ್ಷೇತ್ರ, ಹಿಮಾಚಲ ಪ್ರದೇಶದ 4, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9, ಬಿಹಾರದ 8 ಹಾಗೂ ಒಡಿಶಾದ 6, ಜಾರ್ಖಂಡ್‌ನ 3 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರೊಂದಿಗೆ ಒಡಿಶಾದ 42 ಮತ್ತು ಹಿಮಾಚಲ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವೂ ಜೂನ್ 1ರಂದೇ ನಡೆಯಲಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಲಾಲು ಪ್ರಸಾದ್ ಪುತ್ರಿ ಮಿಸಾ ಭಾರ್ತಿ, ನಟಿ ಕಂಗನಾ ರನೌತ್ ಸೇರಿದಂತೆ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು 10.06 ಕೋಟಿ ಮತದಾರರು ಈ 57 ಕ್ಷೇತ್ರಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇವರಲ್ಲಿ 5.24 ಕೋಟಿ ಪುರುಷರು ಹಾಗೂ 4.82 ಕೋಟಿ ಮಹಿಳೆಯರು ಮತ್ತು 3,574 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಲಿದ್ದಾರೆ.

1.09 ಲಕ್ಷ ಮತಗಟ್ಟೆಗಳಿಗೆ ಈಗಾಗಲೇ ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತು ಸಾಗಿದ್ದಾರೆ. 

ಏ. 19ರಿಂದ ಆರಂಭವಾದ ಒಟ್ಟು ಏಳು ಹಂತಗಳ 2024ರ ಲೋಕಸಭಾ ಚುನಾವಣೆಗೆ ಶನಿವಾರ ನಡೆಯುವ 7ನೇ ಹಂತದ ಮತದಾನದೊಂದಿಗೆ ತೆರೆ ಬೀಳಲಿದೆ. ಜೂನ್ 4ರಂದು ಮತ ಎಣಿಕೆ ನಡೆಯುವ ಮೂಲಕ ಮತದಾರರ ಆಯ್ಕೆ ಯಾರು ಎಂಬುದು ನಿರ್ಧಾರವಾಗಲಿದೆ.

ಈ ಬಾರಿ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ 66.14, ಶೇ 66.71, ಶೇ 65.68, ಶೇ 69.16, ಶೇ 62.2 ಹಾಗೂ ಶೇ 63.36ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಈವರೆಗೂ ನಡೆದಿರುವ ಆರು ಹಂತಗಳ ಮತದಾನದಲ್ಲಿ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ 486 ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ. ಇವುಗಳೊಂದಿಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೂ ಮತದಾನ ಪೂರ್ಣಗೊಂಡಿದೆ. ಇವುಗಳ ಮತ ಎಣಿಕೆಯೂ ಜೂನ್ 4ರಂದೇ ನಡೆಯಲಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜೂನ್ 1ರಂದು ಸಂಜೆ 6.30ರ ನಂತರ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯನ್ನು ಮಾಧ್ಯಮಗಳು ಪ್ರಸಾರ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.