ನದೆವಹಲಿ: 543 ಲೋಕಸಭಾ ಸೀಟುಗಳ ಪೈಕಿ 291ರಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ’ ಮೈತ್ರಿಕೂಟ ಗೆಲುವು ಸಾಧಿಸಿದ್ದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ವಿದೇಶಿ ನಾಯಕರು ಶುಭ ಹಾರೈಸಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಶ್ರೀಲಂಕಾ ನಾಯಕ ಮಹಿಂದ ರಾಜಪಕ್ಸೆ, ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಕೋರಿದ್ದಾರೆ.
‘ಹೊಸ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ನಿಮ್ಮ ಅಧಿಕಾರವಧಿಯಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಸಾಧಿಸಲಿ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಸ್ನೇಹಿತನಿಗೆ ಹೃತ್ಪೂರ್ವಕ ಅಭಿನಂದನೆಗಳು. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗುತ್ತಿರುವುದು ಸಂತಸ ಮೂಡಿಸಿದೆ. ಹೊಸ ಸರ್ಕಾರದೊಂದಿಗೆ ನಮ್ಮ ಬಾಂಧವ್ಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ’ ಎಂದು ಶ್ರೀಲಂಕಾ ನಾಯಕ ಮಹಿಂದ ರಾಜಪಕ್ಸೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವುದು ಖುಷಿ ನೀಡಿದೆ. ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸತತ ಮೂರನೇ ಅವಧಿಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ’ ಎಂದು ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಜೂನ್ 4 (ಮಂಗಳವಾರ) ಫಲಿತಾಂಶ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.