ADVERTISEMENT

ದ್ವೇಷ ಹರಡುವುದು, ಸಮಾಜ ಒಡೆಯುವುದೇ ಮೋದಿ ಗ್ಯಾರಂಟಿ: ಸ್ಟಾಲಿನ್ ಕಿಡಿ

ಪಿಟಿಐ
Published 22 ಏಪ್ರಿಲ್ 2024, 16:02 IST
Last Updated 22 ಏಪ್ರಿಲ್ 2024, 16:02 IST
<div class="paragraphs"><p>ನರೇಂದ್ರ ಮೋದಿ ಹಾಗೂ ಎಂ.ಕೆ.ಸ್ಟಾಲಿನ್</p></div>

ನರೇಂದ್ರ ಮೋದಿ ಹಾಗೂ ಎಂ.ಕೆ.ಸ್ಟಾಲಿನ್

   

ಚೆನ್ನೈ: ‘‘ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷದ ಹೇಳಿಕೆಯು ಸೋಲಿನಿಂದ ತಪ್ಪಿಸಿಕೊಳ್ಳಲು ಅವರು ನಡೆಸಿದ ಕೊನೆಯ ಅಸ್ತ್ರವಾಗಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ.

ಎಕ್ಸ್‌ನ ತಮ್ಮ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಮೋದಿ ಅವರ ವಿಷಕಾರಿ ಮಾತುಗಳು ಅತ್ಯಂತ ಖೇದಕರ. ಅವರ ವೈಫಲ್ಯಗಳ ಕುರಿತು ಸಾರ್ವಜನಿಕರಲ್ಲಿರುವ ಆಕ್ರೋಶದ ಭಯದಿಂದ, ಮೋದಿ ಅವರು ಧರ್ಮಗಳ ನಡುವೆ ದ್ವೇಷ ಬಿತ್ತುವ ಮಾತುಗಳನ್ನಾಡಿದ್ದಾರೆ. ಆ ಮೂಲಕ ತಮಗೆ ಎದುರಾಗಬಹುದಾದ ಸೋಲನ್ನು ತಪ್ಪಿಸುವ ಹುನ್ನಾರ ಅವರದ್ದು. ಇವರ ಈ ಮಾತುಗಳನ್ನು ಗಮನಿಸಿದಾಗ ದ್ವೇಷ ಮತ್ತು ಸಮಾಜ ಒಡೆಯುವುದೇ ಇವರ ಗ್ಯಾರಂಟಿಯಾಗಿದೆ’ ಎಂದಿದ್ದಾರೆ. 

ADVERTISEMENT

‘ಪ್ರಧಾನಿ ಮೋದಿ ಅವರ ಇಂಥ ದ್ವೇಷದ ಭಾಷಣಕ್ಕೆ ಚುನಾವಣಾ ಆಯೋಗವೂ ತಟಸ್ಥ ಧೋರಣೆ ಅಳವಡಿಸಿಕೊಂಡಿದ್ದು ನಾಚಿಕೆಗೇಡಿನ ಸಂಗತಿ. ಇಂಡಿಯಾ ಒಕ್ಕೂಟವು ಜಾತಿ ಜನಗಣತಿಯ ಭರವಸೆ ನೀಡಿದೆ. ಇದು ಬಹುದಿನಗಳ ಬೇಡಿಕೆಯಾಗಿದ್ದು, ಇದು ಸಮ ಸಮಾಜ ನಿರ್ಮಾಣದ ಪ್ರಯತ್ನವಾಗಿದೆ. ಆದರೆ ಪ್ರಧಾನಿ ಇದನ್ನು ತಿರುಚುವ ಮೂಲಕ, ಸಮಾಜದಲ್ಲಿನ ಕೆಲ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಶಿಕ್ಷಣ, ಉದ್ಯೋಗ ಹಾಗೂ ಅಧಿಕಾರಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ಧಾರೆ’ ಎಂದು ದೂರಿದ್ದಾರೆ.

‘ಸಮಾಜವನ್ನು ಒಡೆದು ಆಳುವ ಬಿಜೆಪಿಯ ತಂತ್ರದ ವಿರುದ್ಧ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಆ ಮೂಲಕ ಮೋದಿ ಅವರ ವೈಫಲ್ಯಗಳನ್ನು ಬಿಚ್ಚಿಡಬೇಕಿದೆ’ ಎಂದು ಸ್ಟಾಲಿನ್ ಇಂಡಿಯಾ ಒಕ್ಕೂಟದ ಸದಸ್ಯರಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.