ನವದೆಹಲಿ: ಆದಾಯ ತೆರಿಗೆ (ಐ.ಟಿ) ಇಲಾಖೆಯು ₹1,823.08 ಕೋಟಿ ಪಾವತಿಸುವಂತೆ ಹೊಸದಾಗಿ ನೋಟಿಸ್ ನೀಡಿದೆ ಎಂದು ಶುಕ್ರವಾರ ಹೇಳಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆ ಸಮಯದಲ್ಲಿ ವಿರೋಧ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಬಿಜೆಪಿ ‘ತೆರಿಗೆ ಭಯೋತ್ಪಾದನೆ’ಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಐ.ಟಿ ಕಾನೂನುಗಳನ್ನು ಬಿಜೆಪಿ ಗಂಭೀರವಾಗಿ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಐ.ಟಿ ಅಧಿಕಾರಿಗಳು ಕೇಸರಿ ಪಕ್ಷದಿಂದಲೇ ₹4,617.58 ಕೋಟಿ ಸಂಗ್ರಹಿಸಲು ಡಿಮೆಂಡ್ ನೋಟಿಸ್ ನೀಡಬೇಕು ಎಂದೂ ಆಗ್ರಹಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಾಗೂ ಖಜಾಂಚಿ ಅಜಯ್ ಮಾಕನ್ ಅವರು, ಬಿಜೆಪಿ ಮತ್ತು ಐ.ಟಿ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದರು.
‘ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ನಾವು ವಿಶ್ಲೇಷಿಸಿದ್ದೇವೆ. ಅದು ಪ್ರತಿವರ್ಷವೂ ಎಡವಿರುವುದನ್ನು ಗಮನಿಸಿದ್ದೇವೆ’ ಎಂದು ಮಾಕನ್ ಹೇಳಿದರು.
‘ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅದಕ್ಕೆಲ್ಲ ನಾವು ಬಗ್ಗುವುದಿಲ್ಲ. ಇಂತಹ ನೋಟಿಸ್‌ಗಳಿಗೆಲ್ಲ ಹೆದರುವುದಿಲ್ಲ. ಬದಲಿಗೆ ಮತ್ತಷ್ಟು ಉತ್ಸಾಹದಿಂದ ಮುನ್ನುಗ್ಗುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಮುಂದುವರಿಯುತ್ತದೆ. ಪಕ್ಷದ ಭರವಸೆಗಳನ್ನು ದೇಶದ ಜನರ ಬಳಿಗೆ ಕೊಂಡೊಯ್ಯುತ್ತೇವೆ’ ಎಂದು ಅವರು ಪ್ರತಿಪಾದಿಸಿದರು.
ಶೀಘ್ರವೇ ‘ಸುಪ್ರೀಂ’ನಲ್ಲಿ ವಿಚಾರಣೆ:
ಕಾಂಗ್ರೆಸ್ ಮತ್ತು ಇತರ ಸಮಾನಮನಸ್ಕ ವಿರೋಧ ಪಕ್ಷಗಳನ್ನು ಐಟಿ ಇಲಾಖೆಯು ಗುರಿಯಾಗಿಸುತ್ತಿದೆ ಎಂದ ಮಾಕನ್, ಐ.ಟಿ ಇಲಾಖೆಯ ಬೇಡಿಕೆಗಳ ನೋಟಿಸ್ ಕುರಿತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ ಎಂದರು.
ಕಾಂಗ್ರೆಸ್‌ನ ಚುನಾವಣಾ ವೆಚ್ಚಕ್ಕೆ ತಡೆ ಒಡ್ಡಲು, ಹಣಕಾಸು ಹೊಂದಿಸಿಕೊಳ್ಳುವಲ್ಲಿ ವಿಳಂಬ ಆಗುವಂತೆ ಮಾಡಲು ಮತ್ತು ಒಟ್ಟಾರೆಯಾಗಿ ನಿಷ್ಕ್ರಿಯಗೊಳಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದರು.
‘ದಿವಂಗತ ಸೀತಾರಾಮ್ ಕೇಸರಿ ಅವರು ಪಕ್ಷದ ಖಜಾಂಚಿಯಾಗಿದ್ದ 1993–94ರ ಆರ್ಥಿಕ ವರ್ಷಗಳನ್ನೂ ಅಂದಾಜಿಸಿರುವುದು ನಿಜಕ್ಕೂ ಆಘಾತಕಾರಿ. ಎಂಟು ವರ್ಷಗಳ ಪೈಕಿ ನಾಲ್ಕು ವರ್ಷಗಳಿಗೆ ಸಂಬಂಧಿಸಿದ ಮೌಲ್ಯಮಾಪನ ಆದೇಶಗಳೇ ಇಲ್ಲದೆ ಐ.ಟಿ ಇಲಾಖೆಯು ಬೇಡಿಕೆ ಆದೇಶಗಳನ್ನು ಹೊರಡಿಸಿದೆ. ಇದು ಭಾರತದ ತೆರಿಗೆಯ ಇತಿಹಾಸದಲ್ಲಿಯೇ ಕಂಡರಿಯದ್ದಾಗಿದೆ’ ಎಂದರು.
ಐ.ಟಿ ಇಲಾಖೆ ನಡೆಸಿದ ದಾಳಿ ವೇಳೆಯಲ್ಲಿ ದೊರೆತಿದೆ ಎನ್ನಲಾದ ಡೈರಿಗಳನ್ನು ಆಧರಿಸಿ ಈ ಆದೇಶಗಳನ್ನು ಹೊರಡಿಸಲಾಗಿದೆ. ದಾಳಿಗೊಳಗಾದ ಹಲವರು ಐ.ಟಿ ಇಲಾಖೆಯ ದೋಷಪೂರಿತ ಶೋಧ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆಗಳನ್ನು ತಂದಿದ್ದಾರೆ ಎಂದೂ ಮಾಕನ್ ವಿವರಿಸಿದರು.
‘ಇತರ ಡೈರಿಗಳನ್ನು ಏಕೆ ಗಮನಿಸಿಲ್ಲ’:
‘ಕಾಂಗ್ರೆಸ್ ವಿರುದ್ಧವೇ ಏಕೆ ಈ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಜೆಪಿ ಅಥವಾ ಅದರ ಮೈತ್ರಿ ಪಕ್ಷಗಳ ವಿರುದ್ಧ ಐ.ಟಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಐ.ಟಿ ಇಲಾಖೆಯು ಯಡಿಯೂರಪ್ಪ ಡೈರಿ, ಜೈನ್ ಡೈರಿ, ಸಹಾರಾ ಡೈರಿ, ಬಿರ್ಲಾ ಡೈರಿ, ಬಂಗಾರು ಲಕ್ಷ್ಮಣ್ ಅಪರಾಧಗಳ ಬಗ್ಗೆ ಏಕೆ ಗಮನಹರಿಸಿಲ್ಲ’ ಎಂದು ಅವರು ಕೇಳಿದರು.
‘ಆಯೋಗ ಮೂಕಪ್ರೇಕ್ಷಕ’:
‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಭರವಸೆ ನೀಡುವ ಚುನಾವಣಾ ಆಯೋಗ ಏಕೆ ಮೂಕ ಪ್ರೇಕ್ಷಕನಂತಾಗಿದೆ, 2024ರ ಲೋಕಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಎಂದು ಕರೆಯುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ‘ತೆರಿಗೆ ಭಯೋತ್ಪಾದನೆ’ ಖಂಡಿಸಿ ದೇಶದ ಎಲ್ಲ ರಾಜ್ಯಗಳ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಿದೆ– ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ)
₹11 ಕೋಟಿ ಬಾಕಿ
ಪಾವತಿಸಲು ಸಿಪಿಐಗೆ ಐ.ಟಿ ನೋಟಿಸ್ ನವದೆಹಲಿ (ಪಿಟಿಐ): ಕೆಲವು ವರ್ಷಗಳಿಂದ ತೆರಿಗೆ ವಿವರ ಸಲ್ಲಿಸುವಾಗ ಹಳೆಯ ಪ್ಯಾನ್‌ಕಾರ್ಡ್ ಬಳಸಿದ್ದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ (ಸಿಪಿಐ) ₹11 ಕೋಟಿ ಬಾಕಿ ಮೊತ್ತ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ‘ಈ ಸಂಬಂಧ ನಾವು ಕಾನೂನು ನೆರವು ಪಡೆಯಲು ವಕೀಲರನ್ನು ಸಂಪರ್ಕಿಸುತ್ತಿದ್ದೇವೆ’ ಎಂದು ಸಿಪಿಐನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.