ADVERTISEMENT

ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಯುವ ಸಂಸದರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 22:52 IST
Last Updated 4 ಜೂನ್ 2024, 22:52 IST
   

* ಹೆಸರು: ಶಾಂಭವಿ ಚೌಧರಿ (25 ವರ್ಷ)

ಪಕ್ಷ: ಲೋಕ ಜನಶಕ್ತಿ ಪಕ್ಷ

ಸಮೀಪ ಪ್ರತಿಸ್ಪರ್ಧಿ: ಸನ್ನಿ ಹಜಾರಿ (ಕಾಂಗ್ರೆಸ್‌)

ADVERTISEMENT

ಗೆಲುವಿನ ಅಂತರ: 1,00,0000 

ಉತ್ತರ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶಾಂಭವಿ ಚೌಧರಿ ಲೋಕಸಭೆಯಲ್ಲಿ ದೇಶದ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಲೋಕ ಜನಶಕ್ತಿ ಪಕ್ಷದಿಂದ ಕಳಕ್ಕಿಳಿದಿದ್ದ ಶಾಂಭವಿ ಚೌಧರಿ ಅವರಿಗೆ ಕೇವಲ 25 ವರ್ಷ.

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿನ ಹಿರಿಯ ಸಚಿವ ಜೆಡಿಯುನ ಅಶೋಕ್ ಕುಮಾರ್ ಚೌಧರಿ ಅವರ ಪುತ್ರಿ ಶಾಂಭವಿ ಚೌಧರಿ ಈ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು.

ಶಾಂಭವಿ ತಮ್ಮ ಪ್ರತಿಸ್ಪರ್ಧಿ, ಸಚಿವ ಜೆಡಿಯುನ ಮಹೇಶ್ವರ್ ಹಜಾರಿಯವರ ಪುತ್ರ ಸನ್ನಿ ಹಜಾರಿ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಸನ್ನಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು.

ಶಾಂಭವಿ ಅವರು ಲೋಕಸಭೆ ಚುನಾವಣೆಗೆ ಮುನ್ನ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಔಪಚಾರಿಕವಾಗಿ ಸೇರ್ಪಡೆಯಾಗಿದ್ದರು.  

ಹೆಸರು: ಸಾಗರ್‌ ಖಂಡ್ರೆ (26 ವರ್ಷ)

ಪಕ್ಷ: ಕಾಂಗ್ರೆಸ್‌

ಸಮೀಪ ಪ್ರತಿಸ್ಪರ್ಧಿ: ಭಗವಂತ ಖೂಬಾ (ಬಿಜೆಪಿ)

ಗೆಲುವಿನ ಅಂತರ: 1,29,396

ಬೀದರ್‌ ಲೋಕಸಭಾ ಕ್ಷೇತ್ರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸಾಗರ್‌ ಖಂಡ್ರೆ ಅವರು ಪ್ರಯತ್ನದಲ್ಲೇ ಗೆಲುವು ಕಂಡಿದ್ದಾರೆ.  ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ ದೇಶದ ಅತ್ಯಂತ ಕಿರಿಯರ ಪೈಕಿ ಇವರೂ ಒಬ್ಬರಾಗಿದ್ದಾರೆ. ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಅವರ ಪುತ್ರನಾದ ಸಾಗರ್ ಕಾನೂನು ಪದವೀಧರ.  

‘ಹ್ಯಾಟ್ರಿಕ್‌’ ಗೆಲುವಿನ ಭರವಸೆಯಲ್ಲಿದ್ದ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸಾಗರ್‌ ಮಣಿಸಿದ್ದಾರೆ.  

ಹೆಸರು: ಪ್ರಿಯಾಂಕಾ ಜಾರಕಿಹೊಳಿ (27) 

ಪಕ್ಷ: ಕಾಂಗ್ರೆಸ್‌

ಸಮೀಪ ಪ್ರತಿಸ್ಪರ್ಧಿ: ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ)

ಗೆಲುವಿನ ಅಂತರ: 92,655 

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಿಯಾಂಕಾ ಜಾರಕಿಹೊಳಿ ಜಿದ್ದಾಜಿದ್ದಿಯಿಂದ ಕೂಡಿದ್ದ ಲೋಕ ‘ಕದನ’ದಲ್ಲಿ ಗೆದ್ದು, ಕಿರಿಯ ವಯಸ್ಸಿನಲ್ಲೇ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇವರು ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ. ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಗೆಲುವು ಸಾಧಿಸಿದರು. ಎಂಬಿಎ ಪದವೀಧರೆ ಆಗಿರುವ ಪ್ರಿಯಾಂಕಾ ಉದ್ಯಮಿಯೂ ಹೌದು. ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.   

ಹೆಸರು:ಶ್ರೇಯಸ್‌ ಪಟೇಲ್‌ (32)

ಪಕ್ಷ: ಕಾಂಗ್ರೆಸ್‌

ಸಮೀಪ ಪ್ರತಿಸ್ಪರ್ಧಿ: ಪ್ರಜ್ವಲ್‌ ರೇವಣ್ಣ (ಎನ್‌ಡಿಎ)  

ಗೆಲುವಿನ ಅಂತರ: 39,465

ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ದಿ. ಪುಟ್ಟಸ್ವಾಮಿಗೌಡರ ಮೊಮ್ಮಗ, ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ (32) ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಪ್ರತಿಸ್ಪರ್ಧಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮೊಮ್ಮಗ, ಶಾಸಕ ಎಚ್‌.ಡಿ.ರೇವಣ್ಣನವರ ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಮಣಿಸಿದ್ದಾರೆ. ‘ಪೈನ್‌ ಡ್ರೈವ್‌’ ಹಗರಣದಲ್ಲಿ ಬಂಧಿತರಾಗಿರುವ, ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಎನ್‌ಡಿಎ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಕಣಕ್ಕಿಳಿದಿದ್ದರು. ಬಿಬಿಎಂ ಪದವೀಧರರಾದ ಶ್ರೇಯಸ್‌ ಪಟೇಲ್‌ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎಚ್‌.ಡಿ ರೇವಣ್ಣ ವಿರುದ್ಧ ಪರಾಭವಗೊಂಡಿದ್ದರು. ಈಗ ರೇವಣ್ಣ ಅವರ ಪುತ್ರ ಪ್ರಜ್ವಲ್‌ ಅವರನ್ನು ಸೋಲಿಸಿ ಮುಯ್ಯಿ ತೀರಿಸಿಕೊಂಡಿದ್ದಾರೆ. 

ಹೆಸರು: ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (32)

ಪಕ್ಷ: ಬಿಜೆಪಿ

ಸಮೀಪ ಪ್ರತಿಸ್ಪರ್ಧಿ: ಎಂ.ಲಕ್ಷ್ಮಣ (ಕಾಂಗ್ರೆಸ್)  

ಗೆಲುವಿನ ಅಂತರ: 1,39,262

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಸಂಸದರಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌–ಪ್ರಮೋದಾದೇವಿಯವರ ದತ್ತು ಪುತ್ರ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ್ದಾರೆ.

ಎರಡು ಬಾರಿಯ ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಪಕ್ಷ ಟಿಕೆಟ್‌ ನೀಡದೆ, ಒಡೆಯರ್‌ಗೆ ಮಣೆ ಹಾಕಿತ್ತು. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಅವರನ್ನು ಒಡೆಯರ್‌ ಪರಾಭವಗೊಳಿಸಿದ್ದಾರೆ. ರಾಜಸ್ಥಾನದ ಡುಂಗರ್‌ಪುರದ ರಾಜವಂಶಸ್ಥ ಹರ್ಷವರ್ಧನ್ ಸಿಂಗ್ ಅವರ ಪುತ್ರಿ ತ್ರಿಶಿಕಾ ಕುಮಾರಿಯನ್ನು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವರಿಸಿದ್ದಾರೆ. ಒಡೆಯರ್‌ಗೆ ಬಿಜೆಪಿ ಟಿಕೆಟ್‌ ಸಿಗುವಲ್ಲಿ ಹರ್ಷವರ್ಧನ್ ಸಿಂಗ್ ಅವರ ಪ್ರಭಾವವೂ ಇತ್ತು. 

ಹೆಸರು: ಕಂಗನಾ ರನೌತ್‌ (37)

ಪಕ್ಷ: ಬಿಜೆಪಿ

ಸಮೀಪ ಪ್ರತಿಸ್ಪರ್ಧಿ: ಕಂಗನಾ ರನೌತ್‌ (ಕಾಂಗ್ರೆಸ್‌) 

ಗೆಲುವಿನ ಅಂತರ:  72,080

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್‌ ನಟಿ, ನಿರ್ಮಾಪಕಿ ಕಂಗನಾ ರನೌತ್‌ ಅವರು ಚೊಚ್ಚಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. 

ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ 37ರ ಹರೆಯದ ನಟಿ, ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಮಣಿಸಿ ಭರ್ಜರಿ ಗೆಲವು ಕಂಡಿದ್ದಾರೆ. ರಾಮ್‌ಪುರ ರಾಜವಂಶಸ್ಥ, ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್‌ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್‌ ವಿರುದ್ಧ ಕಂಗನಾ ಅವರು 70 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಹೆಸರು: ಬಾನ್ಸುರಿ ಸ್ವರಾಜ್‌ (40)

ಪಕ್ಷ: ಬಿಜೆಪಿ 

ಸಮೀಪ ಪ್ರತಿಸ್ಪರ್ಧಿ: ಸೋಮನಾಥ್‌ ಭಾರ್ತಿ (ಎಎಪಿ)

ಗೆಲುವಿನ ಅಂತರ: 78,370

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದರೂ,

ರಾಷ್ಟ್ರ ರಾಜಧಾನಿಯ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಾನ್ಸುರಿ ಸ್ವರಾಜ್ ಗೆಲುವು ಸಾಧಿಸಿದ್ದು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ. ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಅವರು ‘ಇಂಡಿಯಾ’ ಮೈತ್ರಿಕೂಟದ ಎಎಪಿ ಅಭ್ಯರ್ಥಿ ಸೋಮನಾಥ್‌ ಭಾರ್ತಿ ಅವರನ್ನು ಮಣಿಸಿದ್ದಾರೆ.

ನಿರ್ಗಮಿತ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರ ಬದಲಿಗೆ ಬಾನ್ಸುರಿ ಸ್ವರಾಜ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಏಳು ಲೋಕಸಭಾ ಸ್ಥಾನಗಳನ್ನು ಹೊಂದಿರುವ ನವದೆಹಲಿಯಲ್ಲಿ ಬಾನ್ಸುರಿ ಸ್ವರಾಜ್ ಸೇರಿದಂತೆ ಆರು ಮಂದಿ ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. 

ಹೆಸರು: ಕರಣ್ ಭೂಷಣ್ ಸಿಂಗ್ (33)

ಪಕ್ಷ: ಬಿಜೆಪಿ

ಸಮೀಪ ಪ್ರತಿಸ್ಪರ್ಧಿ: ಭಗತ್‌ ರಾಮ್‌ (ಸಮಾಜವಾದಿ ಪಕ್ಷ)

ಗೆಲುವಿನ ಅಂತರ: 1,48,843 ಮತಗಳು 

ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಬಿಜೆಪಿಯ ಕರಣ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದ ಕೈಸರ್‌ಗಂಜ್‌ನಿಂದ ಮೊದಲ ಬಾರಿಗೆ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ.

‘ಇಂಡಿಯಾ’ ಮೈತ್ರಿಯ ಸಮಾಜವಾದಿ ಪಕ್ಷದ ಅಭ್ಯರ್ಥಿ ಭಗತ್‌ ರಾಮ್‌ ಅವರ ಎದುರು 5,71,263 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಬಿಜೆಪಿ ಹಿರಿಯ ನಾಯಕ, ನಿರ್ಗಮಿತ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆಪಾದನೆಯ ಪ್ರಕರಣಗಳನ್ನು ದಾಖಲಿಸಿದ ನಂತರ ಅವರಿಗೆ ಪಕ್ಷವು ಈ ಬಾರಿ ಟಿಕೆಟ್‌ ನೀಡಲಿಲ್ಲ. ಅವರ ಬದಲು ಬ್ರಿಜ್‌ ಭೂಷಣ್‌ ಅವರ ಕಿರಿಯ ಮಗ 33ರ ಹರೆಯದ ಕರಣ್ ಅವರನ್ನು ಕಣಕ್ಕಿಳಿಸಿತ್ತು. ಕರಣ್‌ಗೆ ಮೊದಲ ಪ್ರಯತ್ನದಲ್ಲೇ ಗೆಲುವು ದಕ್ಕಿದೆ.  

ಹೆಸರು: ಯೂಸುಫ್‌ ಪಠಾಣ್‌ (41)

ಪಕ್ಷ: ಟಿಎಂಸಿ

ಸಮೀಪ ಪ್ರತಿಸ್ಪರ್ಧಿ: ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್‌)

ಗೆಲುವಿನ ಅಂತರ: 64,084 

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸ್ಟಾರ್ ಮತ್ತು ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.

ಯೂಸುಫ್ ಅವರು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಿದ್ದರು. ಯೂಸುಫ್ ಅವರು ಚೌಧರಿ ಎದುರು  4,23,451 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಡಾ.ನಿರ್ಮಲ್ ಕುಮಾರ್ ಸಹಾ(3,23,685 ಮತ) ಮೂರನೇ ಸ್ಥಾನಕ್ಕೆ ತಳ್ಳಿದರು. ಮೂಲತಃ ಗುಜರಾತ್‌ನವರಾದ ಯೂಸುಫ್‌ ಪಠಾಣ್‌ಗೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಇನಿಂಗ್ಸ್‌ ಆರಂಭಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ಮಾಡಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.