ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೂರದ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ಇನ್ನಿತರ ಚುನಾವಣಾ ಸಾಮಗ್ರಿಗಳನ್ನು ಸಾಗಿಸುವಲ್ಲಿ ಭಾರತೀಯ ವಾಯುಪಡೆಯು ಸುಮಾರು ಒಂದು ಸಾವಿರ ಗಂಟೆಗಳ 1,750 ಕಾರ್ಯಾಚರಣೆ ನಡೆಸಿದೆ.
ಈ ಕುರಿತು ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತೀಯ ವಾಯುಸೇನೆಯು, ‘ಚುನಾವಣೆ ಸಂದರ್ಭದಲ್ಲಿ ಎಂಐ–17, ಲಘು ವಿಮಾನ ಚೇತಕ್ ಹಾಗೂ ಸ್ವದೇಶಿ ನಿರ್ಮಿತ ಹಗುರ ಹೆಲಿಕಾಫ್ಟರ್ ಎಎಲ್‌ಎಚ್ ಧ್ರುವ್ ಬಳಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಇವಿಎಂ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರ ಸಾಗಣೆ ನೆರವೇರಿಸಲಾಗಿದೆ’ ಎಂದಿದೆ.
‘ಚುನಾವಣೆ ಸಂದರ್ಭದಲ್ಲಿ ರಸ್ತೆ ಸಾರಿಗೆ ಸಂಪರ್ಕವಿಲ್ಲದ ದೂರದ ಪ್ರದೇಶಗಳು ಹಾಗೂ ಭದ್ರತಾ ದೃಷ್ಟಿಯಿಂದ ತಲುಪಲಾಗದ ಸ್ಥಳಗಳಿಗೆ ಭಾರತೀಯ ವಾಯು ಸೇನೆ ಮೂಲಕ ತಲುಪಲು ಸಾಧ್ಯವಾಗಿದೆ. ಹೀಗಾಗಿ ಭಾರತೀಯ ವಾಯುಸೇನೆಯು ಚುನಾವಣೆಯ ಒಟ್ಟು ಏಳು ಹಂತಗಳಲ್ಲಿ ಐದು ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದಿದೆ.
ಲೋಕಸಭೆಯ 543 ಕ್ಷೇತ್ರಗಳಿಗೆ ಏ. 19ರಿಂದ ಆರಂಭವಾದ ಏಳು ಹಂತಗಳ ಮತದಾನ ಜೂನ್ 1ಕ್ಕೆ ಕೊನೆಗೊಂಡಿತು. ಜೂನ್ 4ರಂದು ಮತ ಎಣಿಕೆ ಪ್ರಕ್ರಿಯೆಯೂ ಪೂರ್ಣಗೊಂಡು ಹೊಸ ಸರ್ಕಾರ ರಚನೆಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 240 ಕ್ಷೇತ್ರಗಳನ್ನು ಹಾಗೂ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ರಚನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.